ಕೊಡ್ಲಿಪೇಟೆ, ಆ. ೭: ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಅಳವಡಿಸಿ ಕೊಂಡಿದ್ದರೂ ಇಲಾಖೆಯಿಂದ ಅನುಮತಿ ನೀಡುತ್ತಿಲ್ಲ ಎಂದು ಪೋಷಕರು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮದಲ್ಲಿ ಒಂದನೇ ತರಗತಿ ಪ್ರಾರಂಭಿಸಿದ್ದರೂ ಇದುವರೆಗೆ ಇಲಾಖಾ ಅನುಮತಿ ಸಿಕ್ಕಿಲ್ಲ ಎಂದು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಒಂದನೇ ತರಗತಿಗೆ ಅನುಮತಿ ಸಿಗಲಿದೆ ಎಂದು ತಿಳಿಸಿದ ಮೇರೆಗೆ ನಾವುಗಳು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ಆದರೆ ಈವರೆಗೂ ವಿದ್ಯಾರ್ಥಿಗಳ ಪ್ರವೇಶಾತಿ ನೋಂದಣಿ ಆಗಿಲ್ಲ. ಈ ತಿಂಗಳು ತಾ. ೧೦ ರೊಳಗೆ ಆನ್‌ಲೈನ್ ನೋಂದಣಿಗೆ ಕೊನೆಯ ದಿನವಾಗಿದ್ದು, ಈವರೆಗೂ ಅನುಮತಿ ನೀಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಪೋಷಕರಾದ ಬಸಪ್ಪ ಮಾತನಾಡಿ, ನಿಗದಿತ ದಿನಾಂಕ ದೊಳಗೆ ನೋಂದಣಿಯಾಗದಿದ್ದರೆ ಒಂದು ವರ್ಷದ ವಿದ್ಯಾಭ್ಯಾಸ ಮೊಟಕಾಗಲಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೂ ಸಮಸ್ಯೆಯಾಗಲಿದೆ ಎಂದು ಅತಂಕ ವ್ಯಕ್ತಪಡಿಸಿರು. ಶಾಲೆಯ ಬಹುತೇಕ ವಿದ್ಯಾರ್ಥಿಗಳ ಪೋಷಕರು ಬಡವರಾಗಿದ್ದು ಖಾಸಗಿ ಶಾಲೆಗಳ ಶುಲ್ಕ ಪಾವತಿಸಲು ಅಸಮರ್ಥರಾಗಿದ್ದಾರೆ. ಈ ಹಿನ್ನೆಲೆ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ತರಗತಿ ಆರಂಭಿಸುವ ಕುರಿತು ಸರಕಾರ ಅನುಮತಿ ನೀಡುವ ಆಶಾಭಾವನೆಯಿತ್ತು. ಇದೀಗ ಮಕ್ಕಳ ವಿದ್ಯಾಭ್ಯಾಸ ಡೋಲಾಯಮಾನ ವಾಗಿದೆ ಎಂದರು.
ಸಭೆಯ ಅಧಕ್ಷತೆ ವಹಿಸಿದ್ದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ಮಾತನಾಡಿ, ೨೦೨೧/೨೨ ಸಾಲಿನಲ್ಲಿ ಸರ್ಕಾರದ ಅದೇಶದಂತೆ ಇಲಾಖಾ ಅನುಮತಿ ಪಡೆದು ಎಲ್‌ಕೆಜಿ / ಯುಕೆಜಿ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲಾಯಿತು. ಇದರ ಉದ್ಘಾಟನೆ ಸಂದರ್ಭ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಪಾಂಡು ರವರು ಮುಂದಿನ ಸಾಲಿನಿಂದ ಆಂಗ್ಲ ಮಾಧ್ಯಮದಲ್ಲಿ ಒಂದನೇ ತರಗತಿ ಪ್ರಾರಂಭಿಸಲು ಅನುಮತಿ ನೀಡುತ್ತೇವೆಂದು ಭರವಸೆ ನೀಡಿದ್ದರು ಎಂದರು. ಈ ಹಿನ್ನೆಲೆ ಕಳೆದ ಸಾಲಿನ ಯುಕೆಜಿಯ ೩೦ ಮಕ್ಕಳನ್ನು ಒಂದನೆ ತರಗತಿ ಆಂಗ್ಲ ಮಾಧ್ಯಮಕ್ಕೆ ಸೇರಿಸಿಕೊಳ್ಳಲಾಗಿದೆ.
ಆಂಗ್ಲ ಮಾಧ್ಯಮಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಕಡತ ರಾಜ್ಯ ಆಯುಕ್ತರ ಕಚೇರಿಯಲ್ಲಿದೆ. ಇದುವರೆಗೂ ಅನುಮತಿ ನೀಡದೆ ಇಲಾಖೆ ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೂರು ವರ್ಷ ಇತಿಹಾಸವಿರುವ ಈ ಶಾಲೆಯನ್ನು ಉಳಿಸಿ ಕೊಳ್ಳಬೇಕಾದರೆ ಆಂಗ್ಲ ಮಾಧ್ಯಮ ಅನಿವಾರ್ಯ. ಈ ನಿಟ್ಟಿನಲ್ಲಿ ಸಮಿತಿ ಪ್ರಯತ್ನಿಸಲಿದೆ ಎಂದರು.
ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಡಿ.ಎನ್. ವಸಂತ್ ಮಾತನಾಡಿ, ಈ ಸಾಲಿನಿಂದ ಆಂಗ್ಲ ಮಾಧ್ಯಮದಲ್ಲಿ ಒಂದನೇ ತರಗತಿ ಪ್ರಾರಂಭಿಸಲು ನಿರಂತರವಾಗಿ ಇಲಾಖೆಯೊಂದಿಗೆ ವ್ಯವಹರಿಸ ಲಾಗಿತ್ತಾದರೂ ಇದುವರೆಗೂ ಇಲಾಖೆ ಅನುಮತಿ ನೀಡಿಲ್ಲ. ಖಾಸಗಿ ಶಾಲೆಗಳ ಲಾಭಿಗೆ ಇಲಾಖೆ ಮಂಡಿ ಯೂರಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಯಬೇಕಿದೆ ಎಂದರು.
ಇಂದ್ರೋಜಿರಾವ್ ಮಾತನಾಡಿ, ಶಾಸಕರ ಶಿಫಾರಸ್ಸಿನೊಂದಿಗೆ ಅನುಮತಿ ಪಡೆಯುವ ಪ್ರಕ್ರಿಯೆಗಳು ನಡೆದಿದ್ದರೂ ಇಲಾಖೆ ಈ ವರ್ಷಕ್ಕೆ ಅನುಮತಿ ನೀಡದೆ ಸತಾಯಿಸುತ್ತಿದೆ. ಬಡ ಮಕ್ಕಳ ಶಿಕ್ಷಣದೊಂದಿಗೆ ಚೆಲ್ಲಾಟವಾಡುತ್ತಿದೆ. ಇದು ಖಂಡನೀಯ. ಈ ಕುರಿತು ಶಾಸಕರು ಗಮನಹರಿಸಬೇಕಿದೆ ಎಂದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಮಮತ ರಮೇಶ್, ಮೇಲುಸ್ತುವಾರಿ ಸಮಿತಿಯ ಖಜಾಂಚಿ ಡಿ. ಭಗವಾನ್ ಗೌಡ, ಸದಸ್ಯರುಗಳಾದ ಕೆಂಚೇಶ್ವರ, ಕಾಳಯ್ಯ ಮಾಸ್ಟರ್, ಮಮತಾ, ಕವಿತಾ, ಪೋಷಕರಾದ ಬಸಪ್ಪ, ಅರ್ಪಿತ್, ಅಶ್ರಫ್, ದರ್ಶನ್, ಷರೀಫ್, ಸುಜಾತಾ, ಯಶೋದಾ, ಅಶ್ವಿನಿ, ಇಂದಿರಾ, ಪುರುಷೋತ್ತಮ, ಸುಮತಿ, ಸಾಜಿದಾ, ವಿನೋದಾ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.