ಮಡಿಕೇರಿ, ಆ. ೭: ಮಂಜಿನ ನಗರಿ ಮಡಿಕೇರಿಯಲ್ಲಿ ಧಾರಾಕಾರ ಮಳೆ... ಭಾರೀ ಚಳಿಯ ವಾತಾವರಣದ ಭಾನುವಾರದಂದು ಕೊಡವ ಸಮಾಜದ ಸಭಾಂಗಣದಲ್ಲಿ ಬಾಯಲ್ಲಿ ನೀರೂರಿಸುವ... ಮೈ ಬೆಚ್ಚಗಾಗಿಸುವ ತಿಂಡಿ - ತಿನಿಸುಗಳು ಗಮನ ಸೆಳೆದವು. ಕಕ್ಕಡ ಮಾಸದ ವಿಶೇಷ ಖಾದ್ಯಗಳಾದ ಮದ್ದ್ಪುಟ್ಟ್, ಮದ್ದ್ ಪಾಯಸ, ಕೋಳಿಕರಿ... ಞಂಡ್‌ಕರಿ... ಕೂವಲೆಪುಟ್ಟ್, ಬೈಂಬಳೆಕರಿ, ಚೆಕ್ಕೆಕುರು ಪಜ್ಜಿ... ಬಾಳೆ ನುರ್‌ಕ್, ಕಾಡುಮಾವಿನ ಸಾರು... ಇತ್ಯಾದಿಗಳು ವಿಶೇಷ ಅನುಭವ ನೀಡಿತು. ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಕಕ್ಕಡ ನಮ್ಮೆ ಒತ್ತೋರ್ಮೆಕೂಟ ಹಾಗೂ ಕಕ್ಕಡ ನಮ್ಮೆ ತೀನಿ ಪೈಪೋಟಿ ೨೦೨೨ರ ವಿಶೇಷತೆ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಮಹಿಳೆಯರು ಭಾಗಿಗಳಾಗಿದ್ದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿ ಅಮೂಲ್ಯವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರದ್ದಾಗಿದೆ. ಜನಾಂಗದ ಪ್ರತಿ ಆಚರಣೆಯ ಹಿಂದೆ ವೈಜ್ಞಾನಿಕ ಚಿಂತನೆಗಳಿವೆ. ಕಕ್ಕಡ ಸಂದರ್ಭ ಸೇವಿಸುವ ಆಹಾರಗಳು ವಾತಾವರಣ ಹಾಗೂ ಆರೋಗ್ಯಕ್ಕೆ ಪೂರಕವಾಗಿದೆ. ಕಕ್ಕಡ ಸಂದರ್ಭ ತಯಾರಿಸುವ ಆಹಾರಗಳಿಗೆ ತನ್ನದೇ ಆದ ವಿಶೇಷತೆ ಇದ್ದು, ಆಹಾರಗಳನ್ನು ಇಂದಿನ ಯುವಜನತೆಗೆ ಕಲಿಸಬೇಕು ಎಂದು ಕರೆ ನೀಡಿದರು.
ಮಹಿಳೆಯರು ಸಬಲರಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಒಕ್ಕೂಟಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅನುದಾನ ಕೊರತೆಯಿಂದ ಅಕಾಡೆಮಿಯಲ್ಲಿ ನಿರೀಕ್ಷಿತ ಕಾರ್ಯಕ್ರಮಗಳು ಆಗಿಲ್ಲ. ಆದರೆ, ಕೊಡವ ಸಮಾಜಗಳು, ಪೊಮ್ಮಕ್ಕಡ ಕೂಟ ಆಹಾರ ಮೇಳ ಮಾಡುವ ಮೂಲಕ ಕೊಡಗಿನ ಆಹಾರ ಪದ್ಧತಿ ಪರಿಚಯಿಸುವ ಕೆಲಸ ಮಾಡುತ್ತಿದೆ. ಮದ್ದುಸೊಪ್ಪು ಆರೋಗ್ಯ ವರ್ಧಕವಾಗಿದೆ. ಕಾಂಚAಪುಳಿ ಕೊಡಗಿನಲ್ಲಿ ಮಾತ್ರ ದೊರೆಯುತ್ತದೆ. ಇಂತಹ ಆಹಾರ ಪದಾರ್ಥಗಳು, ಕೊಡಗಿನ ಅಡುಗೆಗಳು ಎಲ್ಲರಿಗೂ ಇಷ್ಟವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಆಹಾರಗಳು ಮನ್ನಣೆ ಗಳಿಸಿವೆ ಎಂದರು.
ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಕಾರ್ಯದರ್ಶಿ ಕನ್ನಂಡ ಸಂಪತ್, ಜನರಲ್ ತಿಮ್ಮಯ್ಯ ಶಾಲೆಯ ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ, ಗೋಣಿಕೊಪ್ಪ ಲಯನ್ಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚೋಕೀರ ಪವಿತ್ರಾ ಸೇರಿದಂತೆ ಕೂಟದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಈ ಸಂದರ್ಭ ಪವಿತ್ರ ಅವರು ಕಕ್ಕಡದ ಬಗ್ಗೆ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾಲೆಯಂಡ ಕಾವ್ಯ ಪ್ರಾರ್ಥಿಸಿ, ಉಳ್ಳಿಯಡ ಸಚಿತಾ ಗಂಗಮ್ಮ ಸ್ವಾಗತಿಸಿದರು. ಚೋಕಿರ ಅನಿತಾ ಕಾರ್ಯಕ್ರಮ ನಿರೂಪಿಸಿ, ಬೊಳ್ಳಜೀರ ಯಮುನಾ ವಂದಿಸಿದರು. ಮುಕ್ಕಾಟಿರ ಅಂಜು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.