ಸಿದ್ದಾಪುರ, ಆ. ೭: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ ನದಿ ಪಾತ್ರದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಕರಡಿಗೋಡು ಹಾಗೂ ಗುಹ್ಯ ಕಾವೇರಿ ನದಿ ತೀರಗಳಿಗೆ ಅಮ್ಮತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್ ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಕರ್ ಹಾಗೂ ಗ್ರಾಮ ಸಹಾಯಕ ಕೃಷ್ಣನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು. ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆಯುವಂತೆ ಸೂಚನೆ ನೀಡಿದರು. ಕರಡಿಗೋಡು ಗ್ರಾಮದ ಚಿಕ್ಕನಳ್ಳಿ ಪೈಸಾರಿಗೆ ತೆರಳುವ ಕಿರು ಸೇತುವೆ ಮುಳುಗಡೆಗೊಂಡಿದೆ.

ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ವೀರಾಜಪೇಟೆ ತಹಶೀಲ್ದಾರ್ ಮಾರ್ಗದರ್ಶನದ ಮೇರೆಗೆ ಅಮ್ಮತಿ ಹೋಬಳಿ ಕಂದಾಯ ಇಲಾಖೆ ಅಧಿಕಾರಿಗಳು ನದಿ ತೀರದಲ್ಲಿ ಬೀಡುಬಿಟ್ಟಿದ್ದಾರೆ. ನದಿ ತೀರದ ನಿವಾಸಿಗಳಿಗೆ ಆಶ್ರಯ ಪಡೆಯಲು ಈಗಾಗಲೇ ಸಿದ್ದಾಪುರದಲ್ಲಿ ಪರಿಹಾರ ಕೇಂದ್ರವನ್ನು ಗುರುತಿಸಲಾಗಿದ್ದು, ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್‌ಕುಮಾರ್ ತಿಳಿಸಿದ್ದಾರೆ.