ವೀರಾಜಪೇಟೆ, ಆ. ೬: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆಯನ್ನು ಹಿಂದೂ ಜಾಗರಣ ವೇದಿಕೆಯಿಂದ ಆಯೋಜಿಸಲಾಗಿದೆ ಎಂದು ಸಂಘಟನೆಯ ಪ್ರಮುಖರು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ್ ಅನಿಲ್ ಮಾತನಾಡಿ, ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ತಾ.೯ರಂದು ಬೃಹತ್ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ೬ ಗಂಟೆಗೆ ನಗರದ ತೆಲುಗರ ಬೀದಿಯ ಮಾರಿಯಮ್ಮ ದೇಗುಲದ ಮುಂಭಾಗದಿAದ ಮೆರವಣಿಗೆಯು ಆರಂಭವಾಗಿ ಮುಖ್ಯ ಬೀದಿಗಳ ಮೂಲಕ ಸಾಗಿ ಖಾಸಗಿ ಬಸ್ ನಿಲ್ದಾಣ, ಗೊಣಿಕೊಪ್ಪಲು ರಸ್ತೆ, ದೊಡ್ಡಟ್ಟಿ ಚೌಕಿ, ಕಾರು ನಿಲ್ದಾಣದಲ್ಲಿ ಮೆರವಣಿಗೆ ಅಂತ್ಯಗೊಳ್ಳಲಿದೆ ಎಂದರು.

ನಗರ ಸಹ ಸಂಯೋಜಕ್ ದಿನೇಶ್ ನಾಯರ್ ಮಾತನಾಡಿ, ಅಖಂಡ ಭಾರತವು ಪರಕೀಯರ ದಾಳಿಯಿಂದಾಗಿ ಛಿದ್ರಗೊಂಡಿದೆ. ಕರಾಳ ದಿನವನ್ನು, ಜಾಗರಣ ವೇದಿಕೆಯು ಅಖಂಡ ಭಾರತ ಸಂಕಲ್ಪ ದಿನವೆಂದು ಆಚರಿಸುತ್ತ್ತದೆ. ಅಂದು ನಗರದ ಕಾರು ನಿಲ್ದಾಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೇನಾಧಿಕಾರಿಗಳು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಸೋಮಣ್ಣ ವಹಿಸಲಿದ್ದಾರೆ. ಹಿಂದೂ ಯುವ ವಾಹಿನಿಯ ಪ್ರಾಂತೀಯ ಪ್ರಮುಖ್ ಕೆ.ಟಿ. ಉಲ್ಲಾಸ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರತಿಕಾಗೋಷ್ಠಿಯಲ್ಲಿ ತಾಲೂಕು ಸಹ ಸಂಯೋಜಕ್ ಬಿ.ಜಿ. ನಾಗೇಶ್, ನಗರ ನಿಧಿ ಪ್ರಮುಖರಾದ ಕಿಶೋರ್ ಶೆಟ್ಟಿ, ವಲಯ ಸಂಯೋಜಕ್ ಅನಿಲ್ ಅಪ್ಪು ಮತ್ತು ಘಟಕ ಸಂಯೋಜಕರುಗಳಾದ ವಿ.ಡಿ. ಬೋಪಣ್ಣ, ಎಂ.ವಿ. ಸಚಿನ್ ಹಾಜರಿದ್ದರು.