ಸಿದ್ದಾಪುರ, ಆ. ೫: ಎಸ್‌ವೈಎಸ್ ಸಿದ್ದಾಪುರ ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಸಿದ್ದಾಪುರದ ಸರಕಾರಿ ಮಲಯಾಳಂ ಶಾಲೆಯಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ವತಿಯಿಂದ ‘ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ’ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭಿಸಿದ ಸ್ವಚ್ಛತಾ ಅಭಿಯಾನವು ತಾ. ೧ ರಿಂದ ೧೫ ವರೆಗೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಸಿದ್ದಾಪುರದ ಸರಕಾರಿ ಮಲಯಾಳಂ ಶಾಲೆಯಲ್ಲಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಸಿದ್ದಾಪುರದ ಎಸ್‌ವೈಎಸ್ ಘಟಕದ ಅಧ್ಯಕ್ಷ ಶಿಯಬ್ ಲತೀಫಿ ಉಸ್ತಾದ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಶಾಲೆಯ ಪರಿಸರದ ಸುತ್ತಮುತ್ತ ಬೆಳೆದಿದ್ದ ಕಾಡು, ಪೊದೆಗಳನ್ನು ಕಡಿದು ಸ್ವಚ್ಛಗೊಳಿಸಿದ ನಂತರ ಗಿಡಗಳನ್ನು ನೆಟ್ಟು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸಿದ್ದಾಪುರದ ಮಲಯಾಳಂ ಶಾಲೆ ಹಾಗೂ ಸೆಂಟ್ ಆನ್ಸ್ ಶಾಲೆಯ ಮುಂಭಾಗ ತ್ಯಾಜ್ಯಗಳು ರಾಶಿ ಇದ್ದು, ತ್ಯಾಜ್ಯಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಇಸಬ ಅಮೀರ್ ಅಜೀಜ್ ಮುಸ್ಲಿಯಾರ್ ಮಾಲ್ದಾರೆ, ಹಂಸ ಮುಸ್ಲಿಯಾರ್ ಗುಯ್ಯ, ಉಮ್ಮರ್ ಮಠ, ಸೆಂಟರ್ ಇಸಬ ಕಾರ್ಯದರ್ಶಿ ರಸಾದ್ ಎಂ.ಎ., ಸೆಂಟರ್ ಸಮಿತಿಯ ಕಾರ್ಯಕರ್ತರು, ಮಲಯಾಳಂ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸಿ, ಶಿಕ್ಷಕಿ ಫೌಸಿಯ, ಬ್ರಾಂಚ್ ಇಸಬ ಸದಸ್ಯರುಗಳು ಹಾಗೂ ಬ್ರಾಂಚ್ ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಜರಿದ್ದರು.