ಸೋಮವಾರಪೇಟೆ, ಆ. ೪: ಇಂದು ಸಂಜೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಪೌರ ಕಾರ್ಮಿಕ ವೀರೇಶ್ ಅವರು, ಜಡಿ ಮಳೆಯನ್ನೂ ಲೆಕ್ಕಿಸದೇ ಸ್ವಚ್ಛತೆಯಲ್ಲಿ ತೊಡಗಿದ್ದುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು.

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಪೌರ ಕಾರ್ಮಿಕ ವೀರೇಶ್ ಅವರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸ್ವಚ್ಛತೆ ಮಾಡುತ್ತಿದ್ದಾರೆ. ಸಂಜೆ ವೇಳೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಬಸ್‌ನಲ್ಲಿ ಕುಳಿತು ತಿಂಡಿ ತಿನಿಸು, ಚಾಕೋಲೆಟ್‌ಗಳನ್ನು ತಿಂದು ಅದರ ಪ್ಲಾಸ್ಟಿಕ್‌ಗಳನ್ನು ಹೊರಾಂಗಣಕ್ಕೆ ಎಸೆಯುತ್ತಿರುವುದ ರಿಂದ ಇಡೀ ಆವರಣ ತ್ಯಾಜ್ಯಮಯ ವಾಗುತ್ತಿದ್ದು, ಇದನ್ನು ಪ್ರತಿ ದಿನ ವೀರೇಶ್ ಅವರು ಸ್ವಚ್ಛಗೊಳಿಸುತ್ತಿದ್ದಾರೆ.

ಇಂದು ಸಂಜೆಯೂ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭ ಭಾರೀ ಮಳೆ ಸುರಿದು ಇಡೀ ಬಸ್ ನಿಲ್ದಾಣ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಈ ಮಧ್ಯೆ ವೀರೇಶ್ ಅವರು ಮಳೆಯನ್ನು ಲೆಕ್ಕಿಸದೇ ಪಟ್ಟಣ ಪಂಚಾಯಿತಿ ಯಿಂದ ನೀಡಿದ್ದ ರೈನ್‌ಕೋಟ್ ಧರಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.