ಪೊನ್ನಂಪೇಟೆ, ಆ. ೪: ಪೊನ್ನಂಪೇಟೆಯ ಕುಂದ ರಸ್ತೆಯಲ್ಲಿರುವ ನಿನಾದ ಶಾಲೆಯ ಸಮೀಪದ ತೋಡಿನಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹ ಸಂಪೂರ್ಣ ಕೊಳೆತು ಹೋಗಿದ್ದು, ಗುರುತು ಪತ್ತೆಯಾಗದ ಸ್ಥಿತಿಯಲ್ಲಿದೆ.
ಮೃತಪಟ್ಟು ಸುಮಾರು ೧೫ ದಿನ ಕಳೆದಿದ್ದು, ಮೃತ ಮಹಿಳೆಗೆ ೪೫ ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಳದಿ ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಸ್ಥಳಕ್ಕೆ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಸಿಬ್ಬಂದಿ ಪ್ರಮೋದ್ ಹಾಗೂ ಶೋಭ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.