ಗೋಣಿಕೊಪ್ಪಲು, ಆ. ೪: ಮಾಯಮುಡಿ ಪಂಚಾಯಿತಿ ವ್ಯಾಪ್ತಿಯ ಲೈನ್ ಮನೆಯಲ್ಲಿ ವಾಸ ಮಾಡುತ್ತಿರುವ ಆದಿವಾಸಿ ಗಿರಿಜನ ಕುಟುಂಬಗಳು ನಿವೇಶನ ಹಾಗೂ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆಯು ೪ನೇ ದಿನಕ್ಕೆ ಕಾಲಿರಿಸಿದೆ. ಹಲವು ದಶಕಗಳಿಂದ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನೆಲೆಸಲು ಶಾಶ್ವತ ಸೂರಿಲ್ಲದೆ ಕಷ್ಟದಲ್ಲಿದ್ದೇವೆ. ಹಾಗಾಗಿ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದು ನಮ್ಮ ಹಕ್ಕುಗಳನ್ನು ಪಡೆಯುತ್ತೇವೆ ಎಂದರು. ಹೋರಾಟ ಗಾರರು ತಮ್ಮ ದೈನಂದಿನ ಕೂಲಿ ಕೆಲಸವನ್ನು ಬಿಟ್ಟು ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಹಾಗೂ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಪ್ರತಿಭಟನಾಕಾರರು ಹೋರಾಟವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಪ್ರತಿಭಟನಾಕಾರರಿಗೆ ಸರ್ಕಾರದ ಮಾಹಿತಿ ಹಾಗೂ ಆದೇಶವನ್ನು ವಿವರಿಸಿದ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಗಿರಿಜನರಿಗೆ ವಸತಿ ಹಾಗೂ ನಿವೇಶನವನ್ನು ನೀಡಲು ಸರ್ಕಾರ ಇತ್ತೀಚೆಗೆ ಇಲಾಖೆಯ ಮೂಲಕ ಆದೇಶ ನೀಡಿದೆ. ಲೈನ್ ಮನೆಯಲ್ಲಿರುವ ಗಿರಿಜನರು ಇಲಾಖೆಗೆ ಆಗಮಿಸಿ ಅಗತ್ಯ ದಾಖಲಾತಿಗಳನ್ನು ನೀಡಬೇಕು. ಈ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿದೆ. ಆದರೆ ಇನ್ನೂ ಕೂಡ ಬಹುತೇಕ ಮಂದಿ ಕಚೇರಿಗೆ ಆಗಮಿಸಿ ಅಗತ್ಯ ದಾಖಲಾತಿಗಳನ್ನು ಒದಗಿಸಿಲ್ಲ ಆದಷ್ಟು ಬೇಗನೇ ದಾಖಲಾತಿಗಳನ್ನು ಒದಗಿಸಿದಲ್ಲಿ ಇದನ್ನು ಆನ್‌ಲೈನ್ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ. ಆದ್ದರಿಂದ ಕೂಡಲೇ ದಾಖಲಾತಿಗಳನ್ನು ಒದಗಿಸಿ, ಪ್ರತಿಭಟನೆಯನ್ನು ಕೈ ಬಿಡುವಂತೆ ಕೋರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಸರ್ಕಾರದ ಆದೇಶದಂತೆ ಗಿರಿಜನ ಕಲ್ಯಾಣ ಇಲಾಖೆಯು ಕ್ರಮ ಕೈಗೊಳ್ಳಲಿದೆ. ಅಗತ್ಯ ದಾಖಲಾತಿಗಳನ್ನು ಇಲಾಖೆಗೆ ಸಮಯಕ್ಕೆ ಸರಿಯಾಗಿ ಸಲ್ಲಿಸಿದರೆ ತಮ್ಮ ಬೇಡಿಕೆ ಆದಷ್ಟು ಬೇಗನೇ ಈಡೇರಿಸಲು ಇಲಾಖೆ ಬದ್ಧವಾಗಿದೆ. ಪ್ರತಿಭಟನೆಯನ್ನು ಕೈಬಿಟ್ಟು ಇಲಾಖೆಯೊಂದಿಗೆ ಕೈ ಜೋಡಿಸಿ ಇಲಾಖೆಯು ನಿಮ್ಮ ಪರವಾಗಿ ಕೆಲಸ ನಿರ್ವಹಿಸಲಿದ್ದು, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಹೋರಾಟದ ಮುಂದಾಳತ್ವ ವಹಿಸಿರುವ ಆದಿವಾಸಿ ಕಾರ್ಮಿಕ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ಅನೇಕ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದೇವೆ. ಕೇವಲ ಮನೆ ನಿರ್ಮಿಸಲು ನಿವೇಶನ ನೀಡಿ ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿ ದ್ದೇವೆ. ಆದರೆ ಸರ್ಕಾರ ಭರವಸೆ ನೀಡುತ್ತಾ ಸಮಯ ಕಳೆಯುತ್ತಿದೆ. ಹಾಗಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡು ಈಗಾಗಲೇ ನಾಲ್ಕು ದಿನಗಳು ಕಳೆದಿವೆ. ಹೋರಾಟ ಮುಂದುವರೆಸುತ್ತೇವೆ ಎಂದರು.

ಪ್ರತಿಭಟನಾ ಸ್ಥಳದಲ್ಲಿ ಮಾಯಮುಡಿ ಗ್ರಾ.ಪಂ.ಯ ಆಪಟ್ಟೀರ ಟಾಟೂ ಮೊಣ್ಣಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.