ಚೆಯ್ಯಂಡಾಣೆ, ಆ. ೪: ಸ್ಥಳೀಯ ಹಿಂದೂ ಜಾಗರಣಾ ವೇದಿಕೆ ಹಾಗೂ ಸುರಕ್ಷಾ ಸಮಿತಿ ವತಿಯಿಂದ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಕಾರರು ಚೆಯ್ಯಂಡಾಣೆ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಹತ್ಯೆ ಆರೋಪಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ನಂತರ ಮಹಿಳಾ ಸಮಾಜದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಸುರಕ್ಷಾ ಸಮಿತಿಯ ಹಿರಿಯ ಕಾರ್ಯಕರ್ತರಾದ ಜಪ್ಪು ದೇವಯ್ಯ ಮಾತನಾಡಿ, ಪ್ರವೀಣ್ ನೆಟ್ಟಾರು ಹತ್ಯೆಯ ಜಾಲವನ್ನು ಬಯಲಿಗೆಳೆಯಬೇಕು, ಹತೈಗೈದವರನ್ನು ಗಲ್ಲುಶಿಕ್ಷೆ ವಿಧಿಸಬೇಕು, ದೇಶದಲ್ಲಿ ಇಂತಹ ಘಟನೆ ಮರುಕಳಿಸಬಾರದು, ಹಿಂದುಗಳ ಮೇಲೆ ಯಾವುದೇ ರೀತಿಯ ಹಲ್ಲೆಗಳು ಮರುಕಳಿಸದಂತೆ ಸರ್ಕಾರ ಕಟ್ಟೆಚ್ಚರ ವಹಿಸಬೇಕು, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಹಾಗೂ ಪಿಡಿಓ ಆಶಾ ಕುಮಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನಾ ಸಭೆಯಲ್ಲಿ ಮುಖಂಡರುಗಳಾದ ನಾರಾಯಣ ಮೂರ್ತಿ ಕುಕ್ಕೆಮನೆ, ಬಿಜೆಪಿಯ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೊಟಂಬೈಲು, ಪ್ರಮುಖ ಅನಂತ್‌ಕುಮಾರ್, ಚೈಯಂಡ ನವೀನ್, ಬಿಪಿನ್ ಕೋಳಿಮಾಡು, ಸುನಿಲ್ ಕುಮಾರ್, ಶರಣ್ ದೇವಯ್ಯ, ಸಜನ್ ನಂಜುAಡ, ವಿಲಿನ್ ಬೆಪುಡಿಯಂಡ, ಮಿಲನ್, ಚೈಯಂಡ ಲವ ಅಪ್ಪಚ್ಚು, ವಿಶ್ವಜಿತ್, ಹರಿಪ್ರಸಾದ್, ಮಾಜಿ ಸೈನಿಕ ರವಿ ಬೋಪಯ್ಯ, ಛಾಯಾಪ್ರಕಾಶ್, ಶಶಿ, ಮಹಿಳಾ ಕಾರ್ಯಕರ್ತೆರಾದ ಮಂಜುಳಾ, ಪುಷ್ಪ ಸೇರಿದಂತೆ ಇನ್ನಿತರರು ಇದ್ದರು.