ವರದಿ: ವಾಸು ಎ.ಎನ್ ಸಿದ್ದಾಪುರ, ಆ. ೩: ಕಳೆದ ಒಂದು ವಾರಗಳ ಹಿಂದೆಯಷ್ಟೇ ವಿದ್ಯುತ್ ಸ್ಪರ್ಶದಿಂದ ಮೂರು ಕಾಡಾನೆಗಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಪ್ರತ್ಯೇಕ ಕಡೆಗಳಲ್ಲಿ ಹೆಣ್ಣಾನೆ ಹಾಗೂ ಮರಿಯಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆಣ್ಣಾನೆಯೊಂದು ತೋಡಿನ ನೀರಿನಲ್ಲಿ ಸಾವನ್ನಪ್ಪಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.

ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಬಿಬಿಟಿಸಿ ಕಾಫಿ ತೋಟದ ಬಳಿ ಅಂದಾಜು ೬೦ ವರ್ಷ ಪ್ರಾಯದÀ ಹೆಣ್ಣಾನೆಯು ಹರಿಯುವ ನೀರಿನ ತೋಡಿನಲ್ಲಿಯೇ ಕೊನೆಯುಸಿರೆಳೆದಿದೆ. ಇಂದು ಬೆಳಿಗ್ಗೆ ಸಾರ್ವಜನಿಕರು ತೋಡಿನಲ್ಲಿ ಮೃತಪಟ್ಟ ಕಾಡಾನೆಯನ್ನು ಕಂಡು ಅರಣ್ಯ

(ಮೊದಲ ಪುಟದಿಂದ) ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿ ಕ್ರೇನ್ ಮೂಲಕ ತೋಡಿನಿಂದ ಆನೆಯ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿ ಹೊರ ತೆಗೆದಿದ್ದಾರೆ. ಸಾವನ್ನಪ್ಪಿದ ಹೆಣ್ಣಾನೆಗೆ ಅರಣ್ಯ ಇಲಾಖೆಯಿಂದ ಈ ಹಿಂದೆ ‘ರೇಡಿಯೋ ಕಾಲರ್’ ಅಳವಡಿಸಿತ್ತು. ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ ಹಿನ್ನೆಲೆ ಕಾಡಾನೆಗಳ ಹಿಂಡುಗಳ ಚಲನವಲನ ಪತ್ತೆಗೆ ಈ ಹೆಣ್ಣಾನೆಗೆ ‘ರೇಡಿಯೋ ಕಾಲರ್’ ಅಳವಡಿಸಲಾಗಿತ್ತು. ಪಶು ವೈದ್ಯಾಧಿಕಾರಿಗಳಾದ ಡಾ. ಚಿಟ್ಟಿಯಪ್ಪ ಹಾಗೂ ಡಾ. ಶಾಂತೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಬಿಬಿಟಿಸಿ ಸಂಸ್ಥೆಯ ಕಾಫಿ ತೋಟದೊಳಗೆ ಆನೆಯ ಕಳೇಬರವನ್ನು ಹೂತು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಸ್ಥಳಕ್ಕೆ ಎ.ಸಿ.ಎಫ್ ನೆಹರು, ಪೆಮ್ಮಯ್ಯ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಆನೆ ಸಾವು ಸಹಜ ಸಾವೆಂದು ಪರಿಗಣಿಸಲಾಗಿದೆ ಎಂದು ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಮಾಹಿತಿ ನೀಡಿದ್ದಾರೆ.

ಮರಿಯಾನೆ ಸಾವು

ಕಾಡಾನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ಸಾವನ್ನಪ್ಪಿರುವ ಘಟನೆ ಕುಶಾಲನಗರ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಸಮೀಪದ ಘಟ್ಟದಳ್ಳ ಬಳಿ ಅರಣ್ಯ ಪ್ರದೇಶದೊಳಗೆ ನಡೆದಿದೆ. ಕಾಡಾನೆಗಳ ಗುಂಪಿನಲ್ಲಿದ್ದ ಮರಿಯಾನೆಯು ದೊಡ್ಡ ಕಾಡಾನೆಗಳ ಕಾಲಿಗೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಮರಿಯಾನೆಗೆ ಅಂದಾಜು ೭ ತಿಂಗಳು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಕುಶಾಲನಗರ ವಿಭಾಗದ ಎ.ಸಿ.ಎಫ್ ನೆಹರು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಉಪವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿಗಳಾದ ಮಂಜುನಾಥ್ ಗೂಳಿ ಇನ್ನಿತರರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಪಶು ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಮೃತಪಟ್ಟ ಮರಿಯಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಪ್ರದೇಶದೊಳಗೆ ಕಳೇಬರವನ್ನು ಹೂತು ಹಾಕಲಾಯಿತು.