ವರದಿ: ಕಿರಣ್ ಕುಂಬಳಚೇರಿ, ಶಭರೀಶ್ ಕುದ್ಕುಳಿ
ಪೆರಾಜೆ, ಆ.೩: ಮಳೆ ಎಂದರೆ ಕೊಡಗು ಜಿಲ್ಲೆ ಎಂದೇ ಎಲ್ಲೆಡೆ ಜನಜನಿತ.., ಕಳೆದ ಜುಲೈ ತಿಂಗಳಲ್ಲಿ ಇದು ಸಾಬೀತು ಕೂಡ ಆಗಿದೆ. ಆದರೆ ಇದೀಗ ಕೊಂಚ ಕಡಿಮೆ ಆಗಿದೆಯಾದರೂ ನೆರೆಯ ಗಡಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಬಿರುಸು ಗೋಚರಿಸುತ್ತಿದೆ. ಮಳೆಗಿಂತ ಹೆಚ್ಚಾಗಿ ಹರಿಯುತ್ತಿರುವ ಪಯಸ್ವಿನಿ ನದಿ ಉಕ್ಕೇರಿ ಹರಿಯುತ್ತಿದ್ದು, ನಿನ್ನೆ ಮಧ್ಯರಾತ್ರಿಯಿಂದಲೇ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇತ್ತ ಮಳೆ ಹಾಗೂ ಶೀತ ವಾತಾವರಣದಿಂದಾಗಿ ಕೊಯನಾಡು-ದೇವರಕೊಲ್ಲಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಭೀತಿಯಲ್ಲಿದೆ. ಚೆಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೋರಿ ಕುಸಿದು ಸಂಪರ್ಕ ಕಡಿತಗೊಂಡಿದೆ..!
ಕೊಡಗು-ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಕಳೆದೆರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮೊನ್ನೆ ರಾತ್ರಿಯ ಮಳೆಗೆ ಕೊಯನಾಡು, ಸಂಪಾಜೆ, ಕಲ್ಲುಗುಂಡಿಯಲ್ಲಿ ಸಾಕಷ್ಟು ಅನಾಹುತಗಳಾಗಿವೆ. ನಿನ್ನೆ ಬೆಳಿಗ್ಗೆಯಿಂದ ಮಳೆ ಬಿಡುವು ನೀಡಿತ್ತಾದರೂ ರಾತ್ರಿ ವೇಳೆ ಮತ್ತೆ ಬಿರುಸಾಗಿದೆ. ಮಳೆಯ ರಭಸಕ್ಕೆ ಪಯಸ್ವಿನಿ ನದಿ ಮತ್ತೆ ಉಕ್ಕೇರಿದ್ದು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ನೀರು ತುಂಬಿಕೊAಡು ರಾತ್ರಿಯಿಂದ ಬೆಳಗ್ಗಿನವರೆಗೆ ವಾಹನಗಳು ದಾರಿಯುದ್ದಕ್ಕೂ ಸಾಲು ಸಾಲಾಗಿ ನಿಂತಿದ್ದವು.
ರಸ್ತೆ ಮೇಲೆ ಹೊಳೆ..!
ಸಂಜೆ ಕಳೆದು ರಾತ್ರಿಯಾಗುತ್ತಿದ್ದಂತೆ ಮಳೆ ತನ್ನ ಅಬ್ಬರವನ್ನು ತೋರಿದೆ. ಕಾಟಕೇರಿಯಿಂದ ಹರಿದು ಬರುವ ಪಯಸ್ವಿನಿ ನದಿ ತುಂಬಿ ರಸ್ತೆ ಮೇಲೆ ಹರಿದಿದೆ. ಪೆರಾಜೆ ಬಳಿಯ ಪಾಲಡ್ಕ, ಅರಂಬೂರು ಬಳಿ ರಸ್ತೆ ಮೇಲೆ ನೀರು ಬಂದು ಬೆಳಗ್ಗಿನವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳೀಯರು, ಅಗ್ನಿ ಶಾಮಕ ದಳ ಹಾಗೂ ಪೊಲೀಸರ ಸಹಕಾರದೊಂದಿಗೆ ದೋಣಿ ಮೂಲಕ ಸಾರ್ವಜನಿಕರನ್ನು ರಸ್ತೆ ದಾಟಿಸಲಾಯಿತು. ಕೆಲವು ಮನೆಗಳು ಹಾಗೂ ಕೃಷಿ ಭೂಮಿಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ.
ಮನೆಗೆ ನೀರು
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಬಳಿಯಿಂದಾಗಿ ಹರಿಯುತ್ತಿರುವ ಪಯಸ್ವಿನಿ ನದಿಯು ಉಕ್ಕಿ ಹರಿದಿದೆ. ಇದರ ಪರಿಣಾಮ ದೇವಸ್ಥಾನ ಹಿಂಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನು ಮತ್ತು ಬಾರಡ್ಕ ಬಾಬು ಎಂಬವರ ಮನೆಗೆ ನೀರು ನುಗ್ಗಿದ್ದು ಅಲ್ಲಿಂದ ಸ್ಥಳಾಂತರ ಮಾಡಲಾಗಿದೆ. ಮನೆಯ ಕೆಲವು ಅಗತ್ಯ ಸಾಮಗ್ರಿಗಳು ನಾಶವಾಗಿದ್ದು, ಕೋಳಿಗಳು ಸತ್ತು ಬಿದ್ದಿವೆ. ಇಷ್ಟೇ ಅಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ರಮೇಶ್ ಪೆರಾಜೆ, ಪುರುಷೋತ್ತಮ ನಾಯರ್, ನಾರಾಯಣ ನಾಯ್ಕ, ಕುಂಞಪ್ಪ, ಅಬೂಬಕ್ಕರ್ ಉಳಿಯ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ ಹಾಗೂ ನಾರಾಯಣ ಬಳ್ಳಡ್ಕ ಅವರ ಮನೆಯ ಅಂಗಳದ ಸಮೀಪಕ್ಕೆ ನೀರು ಬಂದಿದ್ದು, ಕೆಲವು ಸಮಯಗಳಲ್ಲಿ ನೀರಿನ ಮಟ್ಟ ಕಡಿಮೆಯಾದ ಪರಿಣಾಮ ಹಾನಿಯಾಗಿಲ್ಲ.
ಚೆಂಬು ಸಂಪರ್ಕ ಕಡಿತ
ಚೆಂಬು ಗ್ರಾಮಕ್ಕೆ ಕೊಡಗು ಸಂಪಾಜೆಯಿAದ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಪಡ್ಕ ಎಂಬಲ್ಲಿ ನೀರಿನ ಒತ್ತಡಕ್ಕೆ ಮೋರಿಯೊಂದು ಕೊಚ್ಚಿಕೊಂಡು ಹೋಗಿದ್ದು, ಈ ಭಾಗದಿಂದ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಈ ರಸ್ತೆಯ ಮೂಲಕ ಸಂಪಾಜೆಯಿAದ ಚೆಂಬುವಿನ ಊರುಬೈಲು, ಬಾಲೆಂಬಿ ಕಡೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಇದೀಗ ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ.
(ಮೊದಲ ಪುಟದಿಂದ) ಚೆಂಬು ಗ್ರಾಮದ ದಬ್ಬಡ್ಕದ ಕೊಪ್ಪದ ಬಾಲಕೃಷ್ಣ ಎಂಬವರ ಮನೆ ಮೇಲೆ ಬರೆ ಕುಸಿದು ಬಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ.
ಹೆದ್ದಾರಿ ಬಿರುಕು
ಕೆಲ ದಿನಗಳಿಂದ ಸುರಿದ ಬಾರಿ ಮಳೆಗೆ ,ಮಡಿಕೇರಿ ಸುಳ್ಯ ಹೆದ್ದಾರಿಯಲ್ಲಿ ಕೊಡಗು ಸಂಪಾಜೆ ಗ್ರಾಮದ, ಕೊಯನಾಡು-ದೇವರಕೊಲ್ಲಿ ಮಧ್ಯೆ ಗಾರೆಮುರೆ ಸಮೀಪ ರಸ್ತೆಯಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಈ ರಸ್ತೆಯ ಪಕ್ಕದಲ್ಲೇ ಇರುವ ಹಳೆಯ ರಸ್ತೆಯನ್ನು ಜೆಸಿಬಿ ಯಂತ್ರಗಳ ಮೂಲಕ ದುರಸ್ತಿ ಪಡಿಸಲಾಗುತ್ತಿದೆ. ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಮಳೆ ಹೆಚ್ಚಾದಲ್ಲಿ ರಸ್ತೆಯೇ ಕುಸಿಯುವ ಸಾಧ್ಯತೆಯಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಭೇಟಿ ನೀಡಿ ಪರಿಶೀಲಿಸಿದರು.
ತೋಟಕ್ಕೆ ನೀರು
ಪೆರಾಜೆಯ ದಾಸರ ಹಿತ್ತಲುವಿನಲ್ಲಿ ಪಯಸ್ವಿನಿ ನದಿ ನೀರು ರಸ್ತೆಗೆ ಬಂದ ಕಾರಣ ಮಡಿಕೇರಿಯಿಂದ ಸುಳ್ಯ ಮಾರ್ಗದಲ್ಲಿ ವಾಹನ ಸಂಚಾರ ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಸ್ಥಗಿತಗೊಂಡಿತು, ಇಲ್ಲಿಯು ಹಲವು ತೋಟಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ.
ಕೊಯನಾಡು ಗಣಪತಿ ಗುಡಿಯ ಸಮೀಪದ ಪಯಸ್ವಿನಿ ನದಿಯ ಸೇತುವೆಯ ಎರಡು ಬದಿಗಳಲ್ಲಿ ನೀರಿನ ಹೊಡೆತಕ್ಕೆ ಮಣ್ಣು ಕುಸಿದಿರುತ್ತದೆ, ಮಳೆ ಹೀಗೆ ಮುಂದುವರೆದರೆ ಸೇತುವೆಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆದರೆ ಪಕ್ಕದಲ್ಲೇ ಹಳೆಯ ಸೇತುವೆಯಿದ್ದು, ಸಂಪರ್ಕ ಸಾಧಿಸಲು ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೂಗು ಸೇತುವೆಗೆ ಹಾನಿ
ಪೆರಾಜೆಯಿಂದ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡಿಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಗೆ ಹೊಂದಿಕೊAಡು ನೀರು ಬಂದಿದ್ದು, ನೀರಿನಲ್ಲಿ ಬಂದ ಮರಗಳು ತೂಗುಪಾಲಕ್ಕೆ ಗುದ್ದಿದ ಪರಿಣಾಮ ಸೇತುವೆಗೆ ಹಾನಿಯಾಗಿರುತ್ತದೆ. ಇದೇ ಪಾಲದಲ್ಲಿ ಸಾರ್ವಜನಿಕರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುತ್ತಿರುತ್ತಾರೆ. ಇದೀಗ ಸಂಪರ್ಕ ಕಷ್ಟ ಸಾಧ್ಯವಾಗಿದೆ.