ದಾವಣಗೆರೆ, ಆ. ೩: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಅವರ ಅಭಿಮಾನಿಗಳು ಆಯೋಜಿಸಿದ್ದ ಸಿದ್ದರಾಮೋತ್ಸವದಲ್ಲಿ ಜನಸಾಗರ ಹರಿದು ಬಂತು. ಅದಲ್ಲದೆ ಕಾಂಗ್ರೆಸ್ ನಾಯಕರ ದಂಡು ಪಕ್ಷದ ಶಕ್ತಿಯನ್ನು ಪ್ರದರ್ಶಿಸಿದಂತಿತ್ತು.
ರಾಜ್ಯ ಬಿಜೆಪಿ ಸರ್ಕಾರ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಹದಗೆಡಿಸಿ, ಜನರನ್ನು ವಿಭಜಿಸುತ್ತಿದೆ ಎಂದು ಎಐಸಿಸಿ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಸಮುದಾಯಗಳು ಶಾಂತಿ, ಸಾಮರಸ್ಯದಿಂದ ಬಾಳುತ್ತಿದ್ದರು. ಯಾರಿಗೂ ಭಯವಿರಲಿಲ್ಲ. ಆದರೆ, ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಅಶಾಂತಿ ನೆಲೆಸಿದೆ. ಇವತ್ತಿನ ಕರ್ನಾಟದಲ್ಲಿನ ಸಾಮರಸ್ಯದ ಬಗ್ಗೆ ಅಮೇರಿಕದಲ್ಲೂ ಚರ್ಚೆ ಯಾಗುತ್ತಿದ್ದು, ಈಗ ಸರ್ವ ಧರ್ಮ, ಸಾಮರಸ್ಯ ಕಾಣುತ್ತಿಲ್ಲ ಎಂದು ಅಮೇರಿಕದ ಪ್ರಜೆಗಳು ಹೇಳುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸಾಮರಸ್ಯ ಮೂಡಿಸಿದರೆ ಬಿಜೆಪಿ ಸರ್ಕಾರ ರಾಜಕೀಯ ಕಾರಣಕ್ಕಾಗಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯಿಂದ ದ್ವೇಷದ ರಾಜಕಾರಣ ನಡೆಸಲಾಗುತ್ತಿದೆ. ಹಿಂದೂ ರಾಷ್ಟç ನಿರ್ಮಾಣ ಬಿಜೆಪಿಯ ಗುರಿಯಾಗಿದೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಗಿಸುವ ನಿಮ್ಮ ಕನಸು ನನಸು ಆಗಲ್ಲ, ದೇಶದ ಸಂವಿಧಾನ ಬದಲಿಸಲು ಈ ದೇಶದ ಜನ ಬಿಡಲ್ಲ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಗುಡುಗಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸರಣಿ ಕೊಲೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಪ್ರವೀಣ್ ನಿವಾಸಕ್ಕೆ ಪರಿಹಾರ ನೀಡಿ, ಮಸೂದ್, ಫಾಜಿಲ್ ಕುಟುಂಬಕ್ಕೆ ಏಕೆ ಪರಿಹಾರ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರ ಅಭಿಮಾನಿಗಳು ಉತ್ತರ ಕರ್ನಾಟಕ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆಗೆ ಆಗಮಿಸಿದ್ದು, ಬೆಂಗಳೂರು - ಪುಣೆ ಹೆದ್ದಾರಿಯಲ್ಲಿ ಬರೋಬ್ಬರಿ ೬ ಕಿಲೋ ಮೀಟರ್ ಗೂ ಹೆಚ್ಚು ದೂರ ಸಂಚಾರ ದಟ್ಟಣೆ ಉಂಟಾಯಿತು.
ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ: ಚಿತ್ರದುರ್ಗದ ಮುರುಘಾ ಮಠಕ್ಕೆ ಹುಬ್ಬಳ್ಳಿಯಿಂದ ರಾಹುಲ್ ಗಾಂಧಿಯವರು ಆಗಮಿಸಿ ಮುರುಘಾ ಶರಣರ ಆಶೀರ್ವಾದ ಪಡೆದು ಮಠಾಧೀಶರೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು. ಲಿಂಗಾಯತ ಧರ್ಮದ ಲಿಂಗ, ಲಿಂಗಧಾರಣೆ ಬಗ್ಗೆ ಮುರುಘಾ ಶರಣರಲ್ಲಿ ರಾಹುಲ್ ಗಾಂಧಿ ವಿಚಾರಿಸಿದರು. ಈ ವೇಳೆ ಮುರುಘಾ ಶರಣರು ರಾಹುಲ್ ಗಾಂಧಿಗೆ ಲಿಂಗಧಾರಣೆ ಮಾಡಿ ದೀಕ್ಷೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಪಕ್ಷದ ಮುಖಂಡರು, ಶಾಸಕರು ಪಾಲ್ಗೊಂಡಿದ್ದರು.