ಸೋಮವಾರಪೇಟೆ, ಆ. ೩: ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ನೂತನವಾಗಿ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಸೋಮವಾರಪೇಟೆ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಸ್. ಪದ್ಮನಾಭ ಅವರು, ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಜನನ ಮತ್ತು ಮರಣ ಕಾಯ್ದೆ ತಿದ್ದುಪಡಿಯಲ್ಲಿ ಅರ್ಜಿಯನ್ನು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಸಲ್ಲಿಸಬೇಕೆಂದು ಆದೇಶಿಸಿದೆ. ಇದರಿಂದಾಗಿ ಜನ ಸಾಮಾನ್ಯರಿಗೆ ಹಾಗೂ ನ್ಯಾಯ ವಾದಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಅರ್ಜಿಗಳನ್ನು ಸಲ್ಲಿಸಲು ಜನ ಸಾಮಾನ್ಯರು ಮತ್ತು ನ್ಯಾಯವಾದಿಗಳು ತಾಲೂಕು ಕೇಂದ್ರದಿAದ ಜಿಲ್ಲಾ ಕೇಂದ್ರಕ್ಕೆ ಅಲೆಯುವಂತಾಗಿದೆ. ಇದರಿಂದಾಗಿ ಕೆಲಸ ಕಾರ್ಯದಲ್ಲಿ ವಿಳಂಬ ಮತ್ತು ದುಬಾರಿ ವೆಚ್ಚಕ್ಕೆ ಅವಕಾಶ ನೀಡಿದಂತಾಗಿದೆ. ಇದರಿಂದಾಗಿ ಈಗ ತಂದಿರುವ ಕಾಯ್ದೆಯನ್ನು ರದ್ದುಗೊಳಿಸಿ ಈ ಮೊದಲಿನಂತೆಯೇ ತಾಲೂಕು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮುಂದುವರೆಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂಬAಧಿತ ಮನವಿ ಪತ್ರವನ್ನು ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರ ಮೂಲಕ ಕಾನೂನು-ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭ ವಕೀಲರ ಸಂಘದ ಕಾರ್ಯದರ್ಶಿ ಹೇಮಚಂದ್ರ, ಖಜಾಂಚಿ ಧರ್ಮಪ್ರಕಾಶ್, ನಿರ್ದೇಶಕ ಚಂದ್ರಶೇಖರ್, ಹೆಚ್.ಆರ್. ಪವಿತ್ರ, ಯತೀಶ್, ಮುತ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.