ಯಂಗ್ ಇಂಡಿಯಾ ಲಿಮಿಟೆಡ್ ಕಚೇರಿಗೆ ಬೀಗ
ನವದೆಹಲಿ, ಆ. ೩: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಅಂಗವಾಗಿ ಜಾರಿ ನಿರ್ದೇಶನಾಲಯವು ಬುಧವಾರ ನವದೆಹಲಿಯ ನ್ಯಾಷನಲ್ ಹೆರಾಲ್ಡ್ ಕಟ್ಟಡದಲ್ಲಿರುವ ಯಂಗ್ ಇಂಡಿಯಾ ಲಿಮಿಟೆಡ್ ಕಚೇರಿಗೆ ಬೀಗ ಹಾಕಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಯಂಗ್ ಇಂಡಿಯಾ ಲಿಮಿಟೆಡ್ ಕಚೇರಿಯನ್ನು ಅಥವಾ ಆವರಣವನ್ನು ತೆರೆಯುವಂತಿಲ್ಲ ಎಂದು ಜಾರಿ ನಿರ್ದೇಶನಾಲಯ ಸೂಚನೆ ನೀಡಿರುವುದಾಗಿ ಗೊತ್ತಾಗಿದೆ.
ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ
ಬೀಜಿಂಗ್, ಆ. ೩: ಅಮೇರಿಕಾದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡುತ್ತಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿದೆ. ಹೀಗಾಗಿ ಚೀನಾ, ತೈವಾನ್‌ನಿಂದ ಹಣ್ಣು ಮತ್ತು ಮೀನುಗಳ ಆಮದಿನ ಮೇಲೆ ನಿರ್ಬಂಧ ಹೇರಿದೆ. ತೈವಾನ್‌ಗೆ ಪೆಲೋಸಿ ಪ್ರವಾಸವು ರಾಜತಾಂತ್ರಿಕ ಬಿರುಗಾಳಿಯನ್ನು ಹೊತ್ತಿಸಿದ್ದು, ತೈವಾನ್‌ನ ಹಲವು ಆಹಾರೋತ್ಪನ್ನ ಕಂಪನಿಗಳಿAದ ಮಂಗಳವಾರವೇ ಚೀನಾ ಆಮದನ್ನು ನಿಲ್ಲಿಸಿರುವುದನ್ನು ತೈವಾನ್‌ನ ಕೃಷಿ ಮಂಡಳಿ ಕೂಡ ಖಚಿತಪಡಿಸಿದೆ. ಚೀನಾದ ತೀವ್ರ ವಿರೋಧದ ನಡುವೆಯೂ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಅಮೇರಿಕಾದ ವಿಶೇಷ ವಿಮಾನದಲ್ಲಿ ಮಂಗಳವಾರ ತೈವಾನ್ ರಾಜಧಾನಿ ತೈಪೆ ತಲುಪಿದ್ದಾರೆ. ಪ್ರತ್ಯೇಕ ನೋಟಿಸ್‌ನಲ್ಲಿ, ಚೀನಾದ ವಾಣಿಜ್ಯ ಸಚಿವಾಲಯವು ಯಾವುದೇ ವಿವರಗಳನ್ನು ನೀಡದೆಯೇ ಬುಧವಾರದಿಂದ ತೈವಾನ್‌ಗೆ ನೈಸರ್ಗಿಕ ಮರಳನ್ನು ರಫ್ತು ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಚೀನಾ, ತೈವಾನ್‌ನ ಮೇಲೆ ಕಣ್ಣಿಟ್ಟಿರುವುದು ಇದೇ ಮೊದಲಲ್ಲ. ಕ್ರಿಮಿಕೀಟಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿ ಚೀನಾ ೨೦೨೧ರ ಮಾರ್ಚ್ನಲ್ಲಿ ದ್ವೀಪ ರಾಷ್ಟçದಿಂದ ಅನಾನಸ್ ಆಮದನ್ನು ನಿಷೇಧಿಸಿತ್ತು. ಆದರೆ, ಚೀನಾದ ಅತ್ಯಂತ ಸಮರ್ಥ ನಾಯಕ ಎನಿಸಿಕೊಂಡಿರುವ ಸದ್ಯದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿನ ಬೆದರಿಕೆಯು ತೀವ್ರಗೊಂಡಿದೆ.
ಕಾAಗ್ರೆಸ್ ಶಾಸಕ ಕುಲ್ದೀಪ್ ರಾಜೀನಾಮೆ
ಹರಿಯಾಣ, ಆ. ೩: ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್ ಹರಿಯಾಣ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ವಿಧಾನಸಭಾಧ್ಯಕ್ಷ ಗಿಯಾನ್ ಚಂದ್ ಗುಪ್ತಾ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು ಹಿಸಾರ್ ಜಿಲ್ಲೆಯ ಅದಮ್ಪುರ್ ಪ್ರದೇಶದಲ್ಲಿ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಕಾಲದಲ್ಲಿದ್ದ ತನ್ನ ಸಿದ್ಧಾಂತದಿAದ ವಿಮುಖವಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಯ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಪರಿಣಾಮ ಬಿಷ್ಣೋಯ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ನಾಲ್ಕು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿರುವ ಬಿಷ್ಣೋಯ್ ಅವರು ಹರ್ಯಾಣ ಕಾಂಗ್ರೆಸ್ ಪ್ರದೇಶದ ಮುಖ್ಯಸ್ಥರನ್ನಾಗಿ ತಮ್ಮನ್ನು ನೇಮಕ ಮಾಡಲಿಲ್ಲ ಎಂಬ ಕಾರಣಕ್ಕೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು.
ಅನಿಲ ಸೋರಿಕೆ - ೧೦೦ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ
ಆಂಧ್ರಪ್ರದೇಶ, ಆ. ೩: ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ೧೦೦ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ವಿಶೇಷ ಆರ್ಥಿಕ ವಲಯ(ಎಸ್‌ಇಝೆಡ್)ದಲ್ಲಿರುವ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆ ಉಂಟಾಗಿ ೧೦೦ಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಬ್ರಾಂಡಿಕ್ಸ್ ಎಸ್‌ಇಝೆಡ್‌ನಲ್ಲಿ ಉಡುಪು ತಯಾರಿಕಾ ಘಟಕದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಗ್ಯಾಸ್ ಸೋರಿಕೆಯಾದ ಬೆನ್ನಲ್ಲೇ ಕಾರ್ಮಿಕರು ಅಸ್ವಸ್ಥರಾಗಿದ್ದು ಕೂಡಲೇ ಸ್ಥಳೀಯ ಅರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.
ಕೆಸಿಇಟಿ ದಾಖಲೆ ಪರಿಶೀಲನೆ ಮುಂದೂಡಿಕೆ
ಬೆAಗಳೂರು, ಆ. ೩: ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ನಿವಾಸ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಳಿ ಬೃಹತ್ ಪ್ರತಿಭಟನೆ ನಡುವೆ ತಾ. ೫ ರಿಂದ ಆರಂಭವಾಗಬೇಕಿದ್ದ ಕೆಸಿಇಟಿ ದಾಖಲೆ ಪರಿಶೀಲನೆಯನ್ನು ಪ್ರಾಧಿಕಾರ ಮುಂದೂಡಿದೆ. ಕೆಸಿಇಟಿ ಅಂಕಗಳು ಮತ್ತು ಶ್ರೇಯಾಂಕಗಳಲ್ಲಿ ಪುನರಾವರ್ತಿತರಿಗೆ ೨೦೨೧ ರ ಪಿ.ಯು. ಅಂಕಗಳನ್ನು ಸೇರಿಸದ ಪ್ರಾಧಿಕಾರದ ನಿರ್ಧಾರಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬುದು ಸಾಬೀತಾಗಿರುವುದರಿಂದ ಕೆಇಎ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ರಾತ್ರಿ ಟ್ವೀಟ್ ಮಾಡಿರುವ ಸಚಿವರು, ೩ ಲಕ್ಷ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ೨೦೨೧-೨೨ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿ ಈ ವರ್ಷವೂ ಪುನಃ ಸಿಇಟಿ ಬರೆದಿರುವ ೨೪,೦೦೦ ವಿದ್ಯಾರ್ಥಿಗಳ ಪಿಯುಸಿ ಅಂಕಗಳನ್ನು ಪರಿಗಣಿಸದಿರಲು ಕೆಇಎ ನಿರ್ಧರಿಸಿದ್ದು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತಿಳಿಸಲಾಗಿದೆ ಎಂದಿದ್ದಾರೆ.
ರಸ್ತೆ ಬದಿ ಅನಧಿಕೃತ ಕಟ್ಟಡ ನಿರ್ಮಾಣ ತಡೆಗೆ ನಿಯಮ
ಬೆಂಗಳೂರು, ಆ. ೩: ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರು ತಿಳಿಸಿದ್ದಾರೆ. ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಟ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ಎಂಬುದರ ಬಗ್ಗೆ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ. ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯ ಭಾಗದಿಂದ ೪೦ ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಜಿಲ್ಲಾ ಮುಖ್ಯ ರಸ್ತೆಗಳ ಮಧ್ಯಭಾಗದಿಂದ ೨೫ ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಸಿಟಿ ಕಾರ್ಪೋರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಗಳಲ್ಲಿ ಈ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿ ಅಂಚಿನಿAದ ಕನಿಷ್ಟ ೬ ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸಿಟಿ ಕಾರ್ಪೋರೇಷನ್ ಪರಿಮಿತಿಯಿಂದ ೧೫ ಕಿ.ಮೀ. ದೂರದವರೆಗೆ ೧೨ ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರುಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಿಸಲಾಗಿದ್ದು, ರಸ್ತೆಯಿಂದ ಕಟ್ಟಡಗಳ ಅಂತರ ನಿಗದಿಪಡಿಸುವುದು ಹಾಗೂ ರಸ್ತೆ ಗಡಿಯನ್ನು ನಿಗದಿಪಡಿಸುವುದು ಅವರ ಜವಾಬ್ದಾರಿಯಾಗಿರುತ್ತದೆ ಎಂದು ಸಿ.ಸಿ. ಪಾಟೀಲರು ವಿವರಿಸಿದ್ದಾರೆ.
ಮಹೇಶ್ ಜೋಶಿಗೆ ಸಚಿವ ದರ್ಜೆ ಸ್ಥಾನಮಾನ
ಬೆಂಗಳೂರು, ಆ. ೩: ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರಿಗೆ ರಾಜ್ಯ ಸರಕಾರ, ರಾಜ್ಯ ಸಚಿವರ ದರ್ಜೆ ಸಮನಾದ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದ ಸರ್ಕಾರಕ್ಕೆ ಸಮಗ್ರ ಕನ್ನಡಿಗರ ಪರವಾಗಿ ಪರಿಷತ್ತು ಧನ್ಯವಾದ ಸಲ್ಲಿಸಿದೆ.
ವಂಚನೆ ಪ್ರಕರಣ - ಉದ್ಯಮಿಗಳ ಆಸ್ತಿ ಜಪ್ತಿ
ನವದೆಹಲಿ, ಆ. ೩: ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಉದ್ಯಮಿಗಳಾದ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸಲೆ ಅವರಿಗೆ ಸೇರಿದ ರೂ. ೪೧೫ ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಆರೋಪದಡಿ ಮಹಾರಾಷ್ಟç ಮೂಲದ ಬಿಲ್ಡರ್‌ನ ಆಸ್ತಿಯಿಂದ ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ವಶಪಡಿಸಿಕೊಂಡ ಕೆಲವೇ ದಿನಗಳ ನಂತರ, ಜಾರಿ ನಿರ್ದೇಶನಾಲಯ ಭಾರತದ ಅತಿದೊಡ್ಡ ಬ್ಯಾಂಕ್‌ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಲ್ಡರ್‌ಗಳಿಂದ ರೂ. ೪೧೫ ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.