*ಗೋಣಿಕೊಪ್ಪ, ಆ. ೩: ಪರವಾನಗಿ ಹೊಂದದೆ ಅನಧಿಕೃತವಾಗಿ ಬೇಕರಿ ನಡೆಸುತ್ತಿದ್ದ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷö್ಯ ತೋರಿದ ಕಾರಣ ಪಂಚಾಯಿತಿ ನೋಟೀಸ್ ನೀಡಿ ಬೇಕರಿ ಮುಚ್ಚುವಂತೆ ಸೂಚಿಸಿದರೂ ಸಹ ಕಾನೂನು ಪಾಲಿಸದ ಬೇಕರಿಯನ್ನು ಮುಚ್ಚಿ ಮಾಲೀಕರ ವಿರುದ್ಧ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಕ್ರಮಕೈಗೊಂಡಿದೆ.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಮತ್ತು ಸದಸ್ಯರ ತಂಡ, ಆಹಾರ ಇಲಾಖೆಯ ಅಧಿಕಾರಿ ಒಂದು ವಾರದ ಹಿಂದೆ ಪಟ್ಟಣದ ಬೇಕರಿ ಇನ್ನಿತರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಶುಚಿತ್ವ ಕಾಪಾಡಿಕೊಳ್ಳುವಂತೆ ಮತ್ತು ಪರವಾನಗಿ ಪಡೆದುಕೊಳ್ಳುವಂತೆ ತಿಳಿಸಿತ್ತು. ಜೊತೆಗೆ ಶುಚಿತ್ವವಿಲ್ಲದ ಅಂಗಡಿ ಮಳಿಗೆಗಳನ್ನು ಮುಚ್ಚುವ ಮೂಲಕ ಕ್ರಮ ಕೈಗೊಂಡಿತ್ತು. ಆದರೆ, ಜಯಲಕ್ಷಿö್ಮ ಬೇಕರಿಯ ಮಾಲೀಕರು ಪಂಚಾಯಿತಿಯ ಆದೇಶವನ್ನು ನಿರ್ಲಕ್ಷಿಸಿ ಮುಚ್ಚಿದ ಮರುಕ್ಷಣವೇ ಬೇಕರಿ ತೆರೆದು ತಿನಿಸುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ಪಂಚಾಯಿತಿ ಬೇಕರಿಯ ಶುಚಿತ್ವ ಕಾಪಾಡುವಂತೆ ಮತ್ತು ಪರವಾನಗಿ ಪಡೆದುಕೊಳ್ಳುವಂತೆ ನೋಟೀಸ್ ನೀಡಿತ್ತು. ಅದಕ್ಕೂ ಒಪ್ಪದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿ ಮುಂದಾಗಿ ಬೇಕರಿಯನ್ನು ಮುಚ್ಚುವ ಮೂಲಕ ಕಾನೂನು ಪಾಲನೆಗೆ ಮುಂದಾಯಿತು. ಇದೇ ಸಂದರ್ಭದಲ್ಲಿ ಬೇಕರಿಯಲ್ಲಿದ್ದ ಪ್ಲಾಸ್ಟಿಕ್ ಬಳಕೆಗೆ ಎರಡು ಸಾವಿರ ದಂಡವನ್ನು ವಿಧಿಸಿತು. ಪರವಾನಗಿ ಹೊಂದದೆ ಪಿಠೋಪಕರಣಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಬೇಕರಿ ಸಮೀಪದ ಮಳಿಗೆಯನ್ನು ಮುಚ್ಚಲಾಯಿತು. ಜತೆಗೆ ಇನ್ನಿತರ ಸುಮಾರು ೬ಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸಿ ಹದಿನೈದು ಸಾವಿರ ವಸೂಲಾತಿ ಮಾಡಿ ಎಚ್ಚರಿಕೆಯ ಕರೆಯನ್ನು ನೀಡಿದೆ. ಈ ಸಂದರ್ಭ ತಾಲೂಕು ಆಹಾರ ಇಲಾಖೆಯ ಅಧಿಕಾರಿ ಶ್ರೀಕಂಠಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿಎನ್ ಪ್ರಕಾಶ್, ಕೆ. ರಾಜೇಶ್, ಕೊಣಿಯಂಡ ಬೋಜಮ್ಮ, ಮನ್ನಕ್ಕಮನೆ ಸೌಮ್ಯ ಬಾಲು, ವಿವೇಕ್ ರಾಯ್ಕರ್ ಪಿ.ಡಿ.ಓ ಶ್ರೀನಿವಾಸ್, ಕಾರ್ಯದರ್ಶಿ ಗುರುಶ್ರೀ ಸಿಬ್ಬಂದಿಗಳಾದ ಸತೀಶ್, ಇರ್ಷಾದ್ ಹಾಜರಿದ್ದರು.