? ವರದಿ : ಕುಡೆಕಲ್ ಸಂತೋಷ್ ಮಡಿಕೇರಿ, ಆ. ೨ : ತಡರಾತ್ರಿ ಹನ್ನೊಂದು ಗಂಟೆ ಸಮಯ., ಊರಿಗೇ ಊರೇ ಗಾಢ ನಿದ್ರೆೆಯಲ್ಲಿತ್ತು., ಅಲ್ಲೊಂದಷ್ಟು ಮಂದಿ ಮಾತ್ರ ಕಣ್ರೆಪ್ಪೆ ಮಿಟುಕಿಸದೆ ಹಾಗೆಯೇ ನೋಡುತ್ತಲೇ ಇದ್ದರು.., ಇದುವರೆಗೂ ಶಾಂತವಾಗಿ ಹರಿಯುತ್ತಿದ್ದ ಪಯಸ್ವಿನಿ ನದಿ ನೋಡ ನೋಡುತ್ತಿದ್ದಂತೆಯೇ ಮನೆಯ ಸನಿಹ ಬರಲಾರಂಭಿಸಿತು., ಮನೆಯೊಳಗಡೆ ನುಗ್ಗಿ ಮನೆಗಳನ್ನು ದಾಟಿ ರಸ್ತೆಯನ್ನೂ ಆಕ್ರಮಿಸಿಕೊಂಡುಬಿಟ್ಟಿತು., ಕಣ್ಣೆದುರೇ ತಮ್ಮ ಕನಸಿನ ಅರಮನೆಗಳು ಮುಳುಗಡೆಯಾಗಿದ್ದನ್ನು ನೋಡಿ ರಾತ್ರಿಯಿಡೀ ನಿದ್ದೆಯಿಲ್ಲದೇ ಕಳೆದರು.., ಬೆಳಗ್ಗಿನ ಜಾವ ನೋಡುವಾಗ ಎಲ್ಲಾ ಕನಸು, ಆಸೆಗಳು ನೀರು ಪಾಲಾಗಿದ್ದವು..!ಇದು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಾಜೆ ಹಾಗೂ ಕೊಯನಾಡು ಗ್ರಾಮಗಳಲ್ಲಿನ ಅವಾಂತರದ ಚಿತ್ರಣ., ರಾತ್ರಿ ಸುರಿದ ಮಳೆಗೆ ಪಯಸ್ವಿನಿ ಹಾಗೂ ಕುಂಟಿಕಾನ ಉಪನದಿಗಳು ಉಕ್ಕಿ ಹರಿದು ಏಳು ಮನೆಗಳಿಗೆ ನೀರು ನುಗ್ಗಿ ಮನೆಯೊಳಗಡೆ ಇದ್ದ ವಸ್ತುಗಳೆಲ್ಲವೂ ನೀರು ಪಾಲಾಗಿದ್ದರೆ, ಒಂದು ಮನೆ ಕುಸಿದು ಬಿದ್ದು, ಇನ್ನೆರಡು ಮನೆಗಳಿಗೆ ಹಾನಿಯಾಗಿದೆ.

ಕೊಯನಾಡಿನಲ್ಲಿ ಐದು ಮನೆ

ಸಂಪಾಜೆ ಪಂಚಾಯ್ತಿಯ ಕೊಯನಾಡುವಿನ ರಾಜ್ಯ ಹೆದ್ದಾರಿ ಬಳಿ ಇರುವ ಐದು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಲೋಕೇಶ್, ವೇದಾವತಿ, ಶಾಂತಮ್ಮ ಅವರಿಗೆ ಸೇರಿದ ಮನೆಗೆ ನೀರು ನುಗ್ಗಿದ್ದಲ್ಲದೆ, ನೀರಿನೊಂದಿಗೆ ತೇಲಿ ಬಂದ ಮರದ ದಿಮ್ಮಿ ಬಡಿದು ಮನೆಯ ಗೋಡೆ ಕುಸಿದು ಬಿದ್ದಿದೆ. ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಕೆಲವೊಂದು ಕೊಚ್ಚಿಕೊಂಡು ಹೋಗಿವೆ.

ಗುಡ್ಡಪ್ಪ ಹಾಗೂ ಪ್ರೇಮಲತಾ ಅವರಿಗೆ ಸೇರಿದ ಮನೆಯೊಳಗಡೆ ಐದು ಅಡಿಗೂ ಎತ್ತರದಲ್ಲಿ ನೀರು ತುಂಬಿಕೊAಡಿದೆ. ವಸ್ತುಗಳೆಲ್ಲ ನೀರು ಪಾಲಾಗಿವೆ. ನಾಗಪ್ಪ, ಯಶೋಧ ದಂಪತಿಯರ ಮನೆಯೊಳಗೆ ಕೂಡ ಇದೇ ಪರಿಸ್ಥಿತಿಯಾಗಿದೆ. ಇವರುಗಳ ಮೂವರು ಮಕ್ಕಳ ಪೈಕಿ ಓರ್ವ ವಿಶೇಷ ಚೇತನನಾಗಿದ್ದು, ಮಕ್ಕಳೆಲ್ಲರನ್ನೂ ಕರೆದುಕೊಂಡು ಪಕ್ಕದ ಮನೆಯಲ್ಲಿ ಇದ್ದುದರಿಂದ ಐದು ಕುಟುಂಬದವರು ಕೂಡ ಅಪಾಯದಿಂದ ಪಾರಾಗಿದ್ದಾರೆ. ಇವರುಗಳೆಲ್ಲರೂ ಬಡವರಾಗಿದ್ದು, ಮಹಿಳೆಯರು ರಬ್ಬರ್ ತೋಟಗಳಿಗೆ ಕೆಲಸಕ್ಕೆ ಹೋಗುತ್ತಿದ್ದರೆ, ಪುರುಷರು ಅಡಿಕೆ ಕುಯ್ಯುವ ಕೆಲಸಕ್ಕೆ ಹೋಗುತ್ತಾರೆ.

ಸಂಪಾಜೆಯಲ್ಲಿ ಎರಡು ಮನೆ

ಸಂಪಾಜೆ ಗ್ರಾಮದಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅಲ್ಲಿನ ನಿವಾಸಿ ದೆಮ್ಮಲೆ ಜನಾರ್ದನ, ಶೇಷಮ್ಮ ಎಂಬವರಿಗೆ ಸೇರಿದ ಮನೆಗೆ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ. ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರ ಜೀವನೋಪಾಯಕ್ಕಿದ್ದ ದನದ ಕೊಟ್ಟಿಗೆ ಕೂಡ ಬಿದ್ದು ಹೋಗಿದೆ. ಮೋಹನಾಂಗಿ ಎಂಬವರಿಗೆ ಸೇರಿದ ಮನೆಗೆ ಕೂಡ ನೀರು ನುಗ್ಗಿ ಹಾನಿಯಾಗಿದ್ದು, ಹೇಗಾದರೂ ನಮಗೊಂದು ಮನೆ ಮಾಡಿ ಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿ ಗಳಲ್ಲಿ ಭಿನ್ನವಿಸಿ ಕೊಳ್ಳುತ್ತಿದ್ದುದು ಕಂಡು ಬಂದಿತು.

ರೂ. ಐದು ಲಕ್ಷ ಪರಿಹಾರ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ ಕೊಯನಾಡಿನ ಐದು ಹಾಗೂ ಸಂಪಾಜೆಯ ಎರಡು ಮನೆ ಹಾಗೂ ಚೆಂಬು ಗ್ರಾಮದ ಎರಡು ಮನೆ ಸೇರಿದಂತೆ ಒಂಭತ್ತು ಮನೆಗಳನ್ನು ಸಂಪೂರ್ಣ ಹಾನಿ ಎಂದು ಪರಿಗಣಿಸಿ ತಲಾ ರೂ.ಐದು ಲಕ್ಷ ಪರಿಹಾರ ನೀಡಲಾಗುವದು. ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟೆ ಬದಿಯಲ್ಲಿ ತಡೆಗೋಡೆಯನ್ನು ಎರಡು ಮೀಟರ್‌ನಷ್ಟು ಎತ್ತರಿಸಲಾಗುವದು. ಕೊಯನಾಡು ಹಾಗೂ ಸಂಪಾಜೆ ಯಲ್ಲಿನ ಕಿಂಡಿ ಅಣೆಕಟ್ಟೆ ಬಳಿ ಸಂಗ್ರಹ ವಾಗಿರುವ ಹೂಳೆತ್ತಲು ಮಳೆ ಪರಿಹಾರ ನಿಧಿಯಡಿ ಕ್ರಮ ಕೈಗೊಳ್ಳ ಲಾಗುವದು ಎಂದು ತಿಳಿಸಿದರು. ಹೂಳೆತ್ತುವ ಸಂದರ್ಭ ಜೆಸಿಬಿ ವಾಹನಗಳಿಗೆ ತೆರಳಲು ತಾತ್ಕಾಲಿಕ ವಾಗಿ ಜಾಗ ಬಿಟ್ಟುಕೊಡು ವಂತೆ ಸ್ಥಳೀಯರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಒಂಭತ್ತು ಕುಟುಂಬಗಳಿಗೆ ತುರ್ತು ಪರಿಹಾರ ವಾಗಿ ರೂ. ಹತ್ತು ಸಾವಿರದ ಚೆಕ್ ವಿತರಿಸಿದರು.

(ಮೊದಲ ಪುಟದಿಂದ)

ಜಿಲ್ಲಾಧಿಕಾರಿ ಭೇಟಿ

ಸ್ಥಳಕ್ಕೆ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ಮಾಡಿದರಲ್ಲದೆ, ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆದು ಎಲ್ಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಳಜಿ ಕೇಂದ್ರದಲ್ಲಿ ೨೧ ಮಂದಿ

ಸAತ್ರಸ್ತರಿಗಾಗಿ ಕೊಯನಾಡಿನ ಗಣಪತಿ ದೇವಸ್ಥಾನ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕೇಂದ್ರದಲ್ಲಿ ಆಹಾರ, ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೇಂದ್ರದಲ್ಲಿ ಕೊಯನಾಡಿನ ೫ ಕುಟುಂಬಗಳ ೨೧ ಮಂದಿ ತಂಗಿದ್ದಾರೆ. ಸ್ಥಳದಲ್ಲಿ ಉಪ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಹಾಜರಿದ್ದು ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮರ ತೆರವು ಕಾರ್ಯ

ಕಿಂಡಿ ಅಣೆಕಟ್ಟೆಗೆ ಅಡ್ಡಲಾಗಿ ಸಿಲುಕಿಕೊಂಡಿದ್ದ ಮರದ ದಿಮ್ಮಿಗಳನ್ನು ಎನ್‌ಡಿಆರ್‌ಎಫ್ ತಂಡದ ವತಿಯಿಂದ ಕ್ರೇನ್ ಮೂಲಕ ತೆರವು ಕಾರ್ಯಾಚರಣೆ ನಡೆಯಿತು. ಸುಮಾರು ಲೋಡುಗಟ್ಟಲೆ ಮರಗಳನ್ನು ತೆರವುಗೊಳಿಸಲಾಯಿತು.

ಸಂಪಾಜೆ ಗ್ರಾ. ಪಂ. ಅಧ್ಯಕ್ಷೆ ನಿರ್ಮಲಾ ಭರತ್, ಉಪಾಧ್ಯಕ್ಷ ಜಗದೀಶ್, ಸದಸ್ಯರುಗಳಾದ ಕುಮಾರ್ ಚೆದ್ಕಾರ್, ರಮಾದೇವಿ ಕಳಗಿ, ನವೀನ್‌ಕುಮಾರ್, ಅನಿತಾ ಚಂದ್ರಶೇಖರ್, ಬಿಜೆಪಿ ಮಾಧ್ಯಮ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶೋಭಾರಾಣಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಗೋಕುಲ್‌ದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಇದ್ದರು.