ಗೋಣಿಕೊಪ್ಪಲು, ಆ. ೧: ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದ ಹಿನ್ನೀರಿನ ಜಾಗದಲ್ಲಿ ವಾಸ ಮಾಡುತ್ತಿರುವ ರೈತರಿಗೆ ಇಲ್ಲಿನ ಮೀನುಗಾರಿಕೆಗೆ ಲೈಸನ್ಸ್ ನೀಡುವಂತೆ ಕರ್ನಾಟಕ ರಾಜ್ಯ ರೈತ ಕೊಡಗು ಜಿಲ್ಲಾ ಘಟಕದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂದಾಳತ್ವದಲ್ಲಿ ಹಲವು ರೈತರು, ಕೊಡಗು ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಭಾಗದ ರೈತರು ಭೂಮಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೊರ ಜಿಲ್ಲೆಯ ಕೆಲವು ಗುತ್ತಿಗೆದಾರರು ಸಹಕಾರ ಸಂಘದ ನೆಪದಲ್ಲಿ ತಾವೇ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ರೈತರಿಗೆ ಅನ್ಯಾಯವಾಗಿದೆ ಎಂದು ರೈತ ಸಂಘ ಪ್ರ.ಕಾರ್ಯದರ್ಶಿ ಸುಜಯ್ ಹಾಗೂ ಸುಭಾಷ್ ಆರೋಪ ಮಾಡಿದ್ದಾರೆ. ಹಾರಂಗಿ ಜಲಾನಯನ ಪ್ರದೇಶದ ರೈತರು ಈಗಾಗಲೇ ಭೂಮಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಗಮನ ಸೆಳೆದರು.
ಮೀನುಗಾರಿಕೆ ಜಿಲ್ಲಾ ನಿರ್ದೇಶಕಿ ದೀಪಾಂಜಲಿ, ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿ ಮೀನುಗಾರಿಕೆ ವಿಚಾರದಲ್ಲಿ ಇಲಾಖೆಯು ಸದಾ ರೈತರ ಪರವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸ್ಥಳೀಯ ರೈತರಿಗೆ ಮೀನುಗಾರಿಕೆ ಹಕ್ಕನ್ನು ನೀಡಲು ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಈ ವೇಳೆ ರೈತ ಸಂಘದ ಪ್ರ.ಕಾರ್ಯದರ್ಶಿ ಸುಜಯ್ ಮಾತನಾಡಿ, ಹೊರ ಜಿಲ್ಲೆಯಿಂದ ಆಗಮಿಸಿದವರು ಇಲ್ಲಿನ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ಪಡೆಯದೇ ಸಂಘಕ್ಕೆ ಸದಸ್ಯರನ್ನು ತಮಗೆ ಇಷ್ಟ ಬಂದವರನ್ನು ಸೇರಿಸಿಕೊಂಡು ಅನ್ಯಾಯ ಮಾಡಿದ್ದಾರೆ. ಜಲಾನಯನ ಪ್ರದೇಶದ ಪ್ರತಿಯೋರ್ವ ರೈತನನ್ನು ಸಂಘದಲ್ಲಿ ಸದಸ್ಯರನ್ನಾಗಿ ಮಾಡಲು ಕ್ರಮಕೈಗೊಳ್ಳಲು ಮನವಿ ಮಾಡಿದರು.
ರೈತ ಸಂಘದ ಮನವಿ ಸ್ವೀಕರಿಸಿದ ನಿರ್ದೇಶಕಿ ದೀಪಾಂಜಲಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರೈತರ ಸಂಘದ ಪದಾಧಿಕಾರಿಗಳು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ರೈತ ರೊಂದಿಗೆ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಭರವಸೆ ನೀಡಿದರು.
ಭೇಟಿಯ ವೇಳೆ ಸೋಮವಾರಪೇಟೆ ತಾಲೂಕಿನ ಅಧ್ಯಕ್ಷ ದಿನೇಶ್, ಪದಾಧಿಕಾರಿಗಳಾದ ಕೀಜನ ಲಕ್ಷö್ಮಣ್, ಹಾರಂಗಿ ಜಲಾನಯನ ಪ್ರದೇಶದ ರೈತರಾದ ಚೆರಿಯಮನೆ ಮಿಟ್ಟು, ಚಂದ್ರಪಾಲ, ಶಿವಕುಮಾರ್, ಕೆ.ಎಸ್. ಬಾಲಕೃಷ್ಣ, ಸುರೇಶ್, ಗಿರೀಶ್ ಕುಮಾರ್, ವಿನು, ಮಚ್ಚಂಡ ಹಾಗೂ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.