ಮಡಿಕೇರಿ, ಆ.೧: ವೀರಶೈವ-ಲಿಂಗಾಯತರನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಸಭಾದ ಕೊಡಗು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಗಾಂಧಿ ಮೈದಾನದ ಬಳಿ ಜಮಾವಣೆಗೊಂಡ ಸಮಾಜ ಬಾಂಧವರು; ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೌನ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶ ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಗೆ ಸೇರ್ಪಡೆ ಗೊಳಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಮೌನ ಮೆರವಣಿಗೆ
(ಮೊದಲ ಪುಟದಿಂದ) ನಡೆಸಲಾಗುತ್ತಿದ್ದು, ಕೊಡಗು ಜಿಲ್ಲೆಯಲ್ಲಿಯೂ ಹಮ್ಮಿಕೊಂಡಿದ್ದೇವೆ. ಈ ಮೀಸಲಾತಿಯಿಂದಾಗಿ ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು. ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ರಾಜ್ಯದಲ್ಲಿ ಕಳೆದ ೬೦ ವರ್ಷಗಳಿಂದ ವೀರಶೈವ-ಲಿಂಗಾಯತ ಸಮಾಜವು ರಾಜ್ಯದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದರೂ ಕೇಂದ್ರದ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಗೆ ಇನ್ನೂ ಕೂಡ ಸೇರ್ಪಡೆಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಸರಕಾರ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇದ್ದಲ್ಲಿ ಸಮುದಾಯದ ವತಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವದೆಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲುಮಠದ ಮಹಾಂತಸ್ವಾಮೀಜಿ, ಬುದ್ಧಿನಕಟ್ಟೆ ಮಠದ ಅಭಿನವಸಿದ್ಧಲಿಂಗ ಶಿವಾಚಾರ್ಯ, ಮಹಸಭಾದ ರಾಜ್ಯ ಕಾರ್ಯದರ್ಶಿ, ಕಾರ್ಯಕ್ರಮದ ಉಸ್ತುವಾರಿ ರಾಜೇಶ್ವರಿ ನಾಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಭಶಿವ ಮೂರ್ತಿ, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್. ರುದ್ರ ಪ್ರಸನ್ನ, ಸೋಮವಾರಪೇಟೆ ಅಧ್ಯಕ್ಷ ಮಧುಸೂಧನ್, ವೀರಾಜಪೇಟೆ ಉಪಾಧ್ಯಕ್ಷ ಎಸ್.ಎಸ್, ಸುರೇಶ್ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.