ಪೊನ್ನಂಪೇಟೆ, ಆ. ೧ : ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ರಾಮಕೃಷ್ಣರ ಸಂದೇಶಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ತುರುವೇಕೆರೆಯ ಮಾದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷ ಬೋಧ ಸ್ವರೂಪಾನಂದಜೀ ಅವರು ನಡೆಸಿಕೊಟ್ಟರು.

ರಾಮಕೃಷ್ಣರ ಐದು ಮುಖ್ಯ ಉಪದೇಶಗಳಾದ ಸಂಕೀರ್ತನೆ, ಸತ್ಸಂಗ, ನಿರ್ಜನವಾಸ, ಸದ್ಸದ್ವಿಚಾರ ಹಾಗೂ ಸೇವೆ ಬಗ್ಗೆ ಮಾತನಾಡಿದ ಅವರು ರಾಮಕೃಷ್ಣರ ಉಪದೇಶಗಳನ್ನು ಎಲ್ಲರೂ ಪರಿಪಾಲಿಸಿದಲ್ಲಿ ಭಗವತ್ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ರಾಮಕೃಷ್ಣರ ಮಾತಿನಂತೆ ದೀಪವು ಹೇಗೆ ಎಣ್ಣೆ ಇಲ್ಲದೆ ಉರಿಯಲಾರದೋ, ಹಾಗೆಯೇ ಭಗವಂತನಿಲ್ಲದೆ ಮನುಷ್ಯನ ಅಸ್ತಿತ್ವವೇ ಇಲ್ಲ.

ಭಗವಂತನ ನಾಮಸ್ಮರಣೆ ಮಾಡುತ್ತಾ, ಧ್ಯಾನದಿಂದ ಆನಂದವನ್ನು ಅನುಭವಿಸಬೇಕು. ಭಗವಂತನೆ ಸತ್ಯ ಉಳಿದೆಲ್ಲವೂ ಅನಿತ್ಯ ಆದುದರಿಂದ ಅನಿತ್ಯ ವಸ್ತುಗಳ ಮೇಲಿನ ಅನುರಾಗವನ್ನು ಕಿತ್ತೊಗೆಯಬೇಕು. ಎಲ್ಲರೊಡನೆ ಇರು, ತಂದೆ, ತಾಯಿ ಸೇವೆ ಮಾಡು, ಹೆಂಡತಿ, ಮಕ್ಕಳು, ಸ್ನೇಹಿತರು, ಬಂಧುಗಳು ಎಲ್ಲರೊಂದಿಗೂ ಆಪ್ತವಾಗಿ ಪ್ರೀತಿಯಿಂದಿರು.

ಆದರೆ ಮನಸ್ಸಿನಲ್ಲಿ ಭಗವಂತನೊಬ್ಬನೇ ಶಾಶ್ವತ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂಬ ರಾಮಕೃಷ್ಣರ ಮಾತಿನಂತೆ ಈ ಸಂಸಾರ ನನ್ನದಲ್ಲ ಭಗವಂತನದು ಎಂದು ಭಾವಿಸಿ, ಭಗವಂತನಲ್ಲಿ ವಿಶ್ವಾಸ ವಿಡಬೇಕು ಎಂದರು. ರಾಮಕೃಷ್ಣ ಮಠದಲ್ಲಿ ಜಾತಿ ಧರ್ಮ ಬೇಧವಿಲ್ಲದೇ ಎಲ್ಲಾ ವರ್ಗದ ಜನರರಿಗೂ ಮುಕ್ತ ಅವಕಾಶ ನೀಡಿದ್ದು, ಸೇವೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ತತ್ವರೂಪಾನಂದಾಜೀ, ಭೂತನಾಥ ನಂದಾಜಿ, ಧರ್ಮನಾಥಾನಂದಾಜಿ, ಬ್ರಹ್ಮಚಾರಿ ಅನಿಲ್ ಇನ್ನಿತರರು ಇದ್ದರು.