ಪೊನ್ನಂಪೇಟೆ, ಜು. ೩೧: ಇಲ್ಲಿಗೆ ಸಮೀಪದ ಹಳ್ಳಿಗಟ್ಟು ಗ್ರಾಮದ ಶಿವಕುಮಾರ್ ಎಂಬವರು ೬ ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ, ಶಾಶ್ವತ ಶಾರೀರಿಕ ಅಸಹಾಯಕತೆಗೆ ಒಳಗಾಗಿರುವ ಕಾರಣ ಅವರ ಮನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಭೇಟಿ ನೀಡಿ ಮನೆಯ ಪರಿಸ್ಥಿತಿಯನ್ನು ಗಮನಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಹಾಯಕ್ಕಾಗಿ ಮನವಿ ಸಲ್ಲಿದ್ದರು. ಮನವಿಯನ್ನು ಪರಿಗಣಿಸಿದ ಧರ್ಮಾಧಿಕಾರಿಯವರು ೩೦ ಸಾವಿರ ರೂಪಾಯಿ ಸಹಾಯಧನ ಮಂಜೂರು ಮಾಡಿದ್ದು, ಮಂಜೂರಾದ ಮೊತ್ತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ. ದಿನೇಶ್, ಅರುವತೊಕ್ಕಲು ಗ್ರಾ.ಪಂ. ಪಿಡಿಓ ಶಂಕರ ನಾರಾಯಣ ಮೂರ್ತಿ ಹಾಗೂ ಪೊನ್ನಂಪೇಟೆ ಒಕ್ಕೂಟದ ಅಧ್ಯಕ್ಷ ಸುಮನ್ ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ, ಸೇವಾ ಪ್ರತಿನಿಧಿ ರೋಹಿಣಿ, ಸಂಘದ ಸದಸ್ಯರಾದ ತಾಯಮ್ಮ, ಸುಮಾ ಹಾಜರಿದ್ದರು.