ಮಡಿಕೇರಿ, ಆ. ೧: ತಾ. ೧೫ ರಂದು ಭಾರತದ ಸ್ವಾತಂತ್ರö್ಯ ದಿನವನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಅಂಗಡಿಗಳಲ್ಲಿ ಹಾಗೂ ಈ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ತ್ರಿವರ್ಣದ ಮಾಸ್ಕ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಇಂತಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರುಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಪ್ರಾಂಶುಪಾಲ ರನ್ನು ಭೇಟಿ ಮಾಡಿದ ಸಮಿತಿಯ ಆಶಾ ಬಾಲಕೃಷ್ಣ ಮತ್ತು ಇತರ ಸದಸ್ಯರು ಪ್ಲಾಸ್ಟಿಕ್, ಪೇಪರ್ ಧ್ವಜಗಳನ್ನೂ ಕೂಡ ಖರೀದಿಸುವ ಜನರು ಸ್ವಾತಂತ್ರö್ಯ ದಿನಾಚರಣೆಯ ಬಳಿಕ ಅಲ್ಲಲ್ಲಿ, ರಸ್ತೆಗಳಲ್ಲಿ ಧ್ವಜಗಳನ್ನು ಎಸೆದು ಅಪಮಾನ ಮಾಡುತ್ತಾರೆ. ಇಂತಹ ಪ್ಲಾಸ್ಟಿಕ್ ಧ್ವಜಗಳನ್ನು ಮಾರುವ ಮಾರಾಟಗಾರರು ಹಾಗೂ ಬಳಸುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಅದೇ ರೀತಿ ತ್ರಿವರ್ಣ ಮಾಸ್ಕ್ ಬಳಸುವುದೂ ದೇಶಕ್ಕೆ ಅಪಮಾನ ಎಸಗುವ ಕೃತ್ಯವಾಗಿದ್ದು, ಇಂತಹವರ ವಿರುದ್ಧವೂ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.