ಕಣಿವೆ, ಆ. ೧ : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಭಾಗವಹಿಸುವ ಸಾಕಾನೆಗಳನ್ನು ಅಧಿಕಾರಿಗಳೇ ಕರೆದುಕೊಂಡು ಹೋಗಲಿ. ನಾವು ನಮ್ಮ ಸಾಕಾನೆಗಳನ್ನು ಯಾವ ಕಾರಣಕ್ಕೂ ತಡೆಯುವುದಿಲ್ಲ. ಗಜ ಪಯಣದ ಒಳಗೆ ನಮ್ಮ ಬೇಡಿಕೆ ಯನ್ನು ಸರ್ಕಾರ ಈಡೇರಿಸದಿದ್ದಲ್ಲಿ ಆನೆ ಮಾವುತರು ಹಾಗೂ ಕಾವಾಡಿ ಗಳು ನಾವ್ಯಾರೂ ಕೂಡ ಭಾಗವಹಿಸು ವುದಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ಮಾವುತರ ಹಿತರಕ್ಷಣಾ ಸಮಿತಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಆನೆ ಮಾವುತರು ಹಾಗೂ ಕಾವಾಡಿಗಳ ಹಿತರಕ್ಷಣಾ ಸಮಿತಿಯ ಮಹತ್ವದ ಸಭೆಯ ಬಳಿಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಸಮಿತಿಯ ಪದಾಧಿಕಾರಿಗಳು, ಬಹಳ ವರ್ಷಗಳ ನಮ್ಮ ಬೇಡಿಕೆಯಾದ ವೇತನ ಪರಿಷ್ಕರಣೆ ಹಾಗೂ ಮಾವುತರ - ಕಾವಾಡಿಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಹೊಸ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು. ಇಲ್ಲದಿದ್ದಲ್ಲಿ ಆಗಸ್ಟ್ ೭ರ ಗಜಪಯಣದ ಸರ್ಕಾರದ ಆಸ್ತಿಯಾದ ಸಾಕಾನೆಗಳನ್ನು ಲಾರಿಗಳಿಗೆ ಏರಿಸಲು ಸಹಕರಿಸುತ್ತೇವೆ ಹೊರತು ಯಾವ ಕಾರಣಕ್ಕೂ ಆನೆಗಳ ಸಂಗಡ ಬರುವುದಿಲ್ಲ ಎಂಬ ಎಚ್ಚರಿಕೆಯನ್ನು ಇದೇ ಸಂದರ್ಭ ಮಾವುತರು ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಸಮಿತಿಯ ಪ್ರಮುಖ ಜೆ.ಕೆ.ಡೋಬಿ, ಮಾವುತರು ಹಾಗೂ ಕಾವಾಡಿಗಳಿಗೆ ವೇತನ ಹೆಚ್ವಿಸಿದಲ್ಲಿ ಮಾಸಿಕ ೯೬ ಲಕ್ಷ ರೂ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳುತ್ತಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬದ್ಧತೆಯಿಂದ ನಮ್ಮ ಪರವಾಗಿ ಸರ್ಕಾರದ ಜೊತೆ ಸಮಾಲೋಚಿಸದಿದ್ದಲ್ಲಿ ಮುಂದೆ ಸಂಭವಿಸುವ ಘೋರ ಪರಿಣಾಮ ಗಳನ್ನು ಸರ್ಕಾರವೇ ಎದುರಿಸ ಬೇಕಾದೀತು ಎಂದು ಎಚ್ಚರಿಸಿದ್ದಾರೆ.