ಮುಳ್ಳೂರು, ಜು. ೩೧: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ ಆಶ್ರಯದಲ್ಲಿ ಜಾರಿಗೊಳಿಸಿರುವ ಹರ್-ಘರ್-ಜಲ್ ಯೋಜನೆ ಯಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ವ್ಯಾಪ್ತಿಯ ಮನೆ ಮನೆಗಳಿಗೆ ಸೇರಿದಂತೆ ಗ್ರಾಮದಲ್ಲಿರುವ ಶಾಲೆ, ಅಂಗನವಾಡಿ ಕೇಂದ್ರಗಳಿಗೂ ಶೇ. ನೂರರಷ್ಟು ನೀರು ಸಂಪರ್ಕ ಒದಗಿಸಿ ಸಂಪೂರ್ಣಗೊಳಿಸಿರುವ ಗ್ರಾಮಗಳಲ್ಲಿ ಹರ್-ಘರ್ ಜಲೋತ್ಸವ ಆಚರಣೆ ನಡೆಸುವ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಆಗಳಿ ಮತ್ತು ನೀರುಗುಂದ ಗ್ರಾಮಗಳಲ್ಲಿ ಹರ್ ಘರ್ ಜಲೋತ್ಸವವನ್ನು ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಕ್ರೆಡಿಟ್-ಐ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಬೆಸೂರು ಗ್ರಾ.ಪಂ.ಯ ಆಗಳಿ ಮತ್ತು ನೀರುಗುಂದ, ನಂಜರಾಯಪಟ್ಟಣ ಗ್ರಾ.ಪಂ.ನ ನಂಜರಾಯಪಟ್ಟಣ ಮತ್ತು ರಂಗಸಮುದ್ರ ಗ್ರಾಮಗಳಲ್ಲಿ ಮನೆಗಳಿಗೆ ಶೇ. ನೂರರಷ್ಟು ನೀರು ಸಂಪರ್ಕ ಸಂಪೂರ್ಣಗೊಳಿಸಿದ್ದು ಈ ಗ್ರಾಮಗಳಲ್ಲೂ ಸರಕಾರದ ಆದೇಶದಂತೆ ಹರ್ ಘರ್ ಜಲೋತ್ಸವ ಆಚರಿಸಲಾಯಿತು.