ಶ್ರೀಮಂಗಲ, ಆ. ೧: ಅತಿ ಹೆಚ್ಚು ಮಳೆ ಬೀಳುವ ಮತ್ತು ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಗೆ ಒಂದೇ ವಿಭಾಗ ಇರುವುದರಿಂದ ತಡೆರಹಿತ ಗುಣಮಟ್ಟದ ವಿದ್ಯುತ್ ಸರಬರಾಜು ನೀಡಲಾಗುತ್ತಿಲ್ಲ. ಸಮಸ್ಯೆಯನ್ನು ನೀಗಿಸಲು ಮತ್ತು ವಿದ್ಯುತ್ ಮಾರ್ಗದ ಸುಧಾರಣೆಗೆ ಕೊಡಗು ಜಿಲ್ಲೆಯಲ್ಲಿ ಎರಡು ವಿಭಾಗಗಳನ್ನು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗ ಇರುವ ಮಡಿಕೇರಿ ವಿಭಾಗದೊಂದಿಗೆ ಪ್ರತ್ಯೇಕ ಪೊನ್ನಂಪೇಟೆ ವಿಭಾಗ ಸ್ಥಾಪನೆಗೆ ಪ್ರಸ್ತಾವನೆಯಂತೆ ಕಾರ್ಯರೂಪಕ್ಕೆ ಬಂದರೆ ವಿದ್ಯುತ್ ಸಮಸ್ಯೆ ಗರಿಷ್ಠ ಪ್ರಮಾಣದಲ್ಲಿ ಬಗೆಹರಿಯಲಿದೆ ಎಂದು ಕೆಪಿಟಿಸಿಎಲ್ ಮೈಸೂರು ವೃತ್ತದ ಸೂಪರಿಟೆಂಡAಟ್ ಇಂಜಿನಿಯರ್ ಸೋಮರಾಜ್ ತಿಳಿಸಿದರು.
ಸೋಮವಾರ ಶ್ರೀಮಂಗಲದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಶ್ರೀಮಂಗಲ ಹೋಬಳಿ ಕೊಡಗು ಬೆಳೆಗಾರರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಕೆಪಿಟಿಸಿಎಲ್‌ನಲ್ಲಿ ಇಂಜಿನಿಯರ್‌ಗಳ ನೇಮಕಾತಿ ನಡೆಯುತ್ತಿದ್ದು ನೇಮಕಾತಿ ಆದ ತಕ್ಷಣ ಶ್ರೀಮಂಗಲಕ್ಕೆ
(ಮೊದಲ ಪುಟದಿಂದ) ಹೊಸ ಇಂಜಿನಿಯರ್ ನೇಮಿಸಲಾಗುವುದು. ಹುದಿಕೇರಿ ಮತ್ತು ಕುಟ್ಟದಲ್ಲಿ ಎರಡು ಹೊಸ ಸೆಕ್ಷನ್ ಸ್ಥಾಪಿಸಿ ಅತಿ ದೊಡ್ಡ ಪ್ರದೇಶವಾದ ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದ ಹೊರೆಯನ್ನು ತಗ್ಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಹಣಕಾಸಿನ ಅಭಾವದಿಂದ ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬರಲು ತೊಂದರೆಯಾಗಿದೆ. ಮತ್ತೊಮ್ಮೆ ಈ ಪ್ರದೇಶ ಅತಿ ಹೆಚ್ಚು ಮಳೆ ಬೀಳುವ ಹಾಗೂ ಗುಡ್ಡಗಾಡು ಪ್ರದೇಶವಾಗಿರುವುದರಿಂದ ವಿಶೇಷ ಆದ್ಯತೆಯಿಂದ ಈ ಕೇಂದ್ರವನ್ನು ಮಂಜೂರು ಮಾಡಲು ಪತ್ರ ಬರೆಯಲಾಗುವುದು ಎಂದು ಹೇಳಿದರು.
ಶ್ರೀಮಂಗಲ ೬೬ ಕೆ.ವಿ. ಹೊಸ ಘಟಕವನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ಕಾರ್ಯ ಆರಂಭ ಮಾಡಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಇಲ್ಲಿ ೫ ಫೀಡರ್ ಇದ್ದು, ಅದನ್ನು ೮ ಫೀಡರ್‌ಗೆ ಹೆಚ್ಚಿಸಲಾಗುವುದು. ಈಗ ಇರುವ ೧೧ ಕೆ.ವಿ. ಮಾರ್ಗವನ್ನು ಅಗತ್ಯವಾದರೆ ಇನ್ಸುಲೇಟೆಡ್ ಕೇಬಲ್ ಹಾಗೂ ಅಂಡರ್ ಗ್ರೌಂಡ್ ಮಾರ್ಗದಲ್ಲಿ ರೂಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮಾರ್ಗ ನಿರ್ವಹಣೆಗೆ ತುರ್ತಾಗಿ ಸಾಮಗ್ರಿ ಒದಗಿಸಲು ಜಿಲ್ಲಾ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಅವರಿಗೆ ಸೂಚಿಸಿದ ಅವರು ಅಗತ್ಯವಾದ ಸಾಮಗ್ರಿಯನ್ನು ಸಬ್ ಸ್ಟೇಷನ್‌ಗಳಲ್ಲಿ ದಾಸ್ತಾನು ಇರಿಸಿಕೊಳ್ಳಲು, ಇದಕ್ಕಾಗಿ ಕೂಡಲೇ ಅಗತ್ಯ ಹಣ ಬಿಡುಗಡೆ ಮಾಡುವಂತೆ ಅವರು ತಿಳಿಸಿದರು.
ಜಿಲ್ಲಾ ಮುಖ್ಯ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ ಮಾತನಾಡಿ, ಶ್ರೀಮಂಗಲ ವಿದ್ಯುತ್ ಸರಬರಾಜು ಉಪಕೇಂದ್ರದ ವ್ಯಾಪ್ತಿಯಲ್ಲಿರುವ ತುಂಬಾ ಹಳೆಯದಾದ ೧೧ಕೆವಿ ವಿದ್ಯುತ್ ಮಾರ್ಗಗಳನ್ನು ಸುಧಾರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಅದರಂತೆ ಪ್ರಸ್ತಾವನೆ ಬಂದ ತಕ್ಷಣ ಡಿಪಿಆರ್ ಮಾಡಿ ೧೧ ಕೆ.ವಿ. ವಿದ್ಯುತ್ ಮಾರ್ಗಗಳನ್ನು ಸುಧಾರಿಸಲು ಕ್ರಮಕೈಗೊಳ್ಳಲಾಗು ವುದು ಎಂದು ಹೇಳಿದರು.
ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೀಲ್ ಶೆಟ್ಟಿ ಮಾತನಾಡಿ, ಈಗಾಗಲೇ ಗೋಣಿಕೊಪ್ಪ ವಿಭಾಗಕ್ಕೆ ೨೫೦೦ ವಿದ್ಯುತ್ ಕಂಬಗಳು ಬಂದಿದ್ದು ಅವುಗಳಲ್ಲಿ ಹೆಚ್ಚು ಸಮಸ್ಯೆ ಇರುವ ಶ್ರೀಮಂಗಲ ವಿಭಾಗಕ್ಕೆ ನೀಡಲಾಗುವುದು ಎಂದರು.
ಶ್ರೀಮAಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಮಾತನಾಡಿ, ಶ್ರೀಮಂಗಲ ವಿದ್ಯುತ್ ಸರಬರಾಜು ಉಪಕೇಂದ್ರದ ವ್ಯಾಪ್ತಿ ಬಹಳಷ್ಟು ದೊಡ್ಡದಾಗಿದ್ದು ಸುಮಾರು ೧೦೦ ಕಿಲೋ ಮೀಟರ್ ೧೧ ಕೆ.ವಿ. ವಿದ್ಯುತ್ ಮಾರ್ಗ ಇದೆ. ಇಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಶ್ರೀಮಂಗಲ ವಿದ್ಯುತ್ ಕಚೇರಿಯಲ್ಲಿ ಈಗ ಇರುವ ಜೆ.ಇ. ಅವರನ್ನು ತಕ್ಷಣ ವರ್ಗಾವಣೆ ಮಾಡಿ ಮತ್ತೋರ್ವ ಅಧಿಕಾರಿಯನ್ನು ನೇಮಿಸಬೇಕು. ಸಾರ್ವಜನಿಕರ ಅಹವಾಲು ಕೇಳಲು ಸಿಬ್ಬಂದಿಯನ್ನು ನೇಮಿಸಬೇಕು. ದೂರವಾಣಿ ಕರೆ ಸಹ ಸ್ವೀಕರಿಸದೆ ಇರುವುದರಿಂದ ಜನರಿಗೆ ತೊಂದರೆಯಾಗಿದೆ. ಪ್ರತಿನಿತ್ಯವೂ ರಾತ್ರಿ ವಿದ್ಯುತ್ ಇಲ್ಲದಿರುವುದು ಮಕ್ಕಳ ವಿದ್ಯಾಭ್ಯಾಸ ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ರೈತ ಮುಖಂಡ ಪೆಮ್ಮಣಮಾಡ ರಮೇಶ್ ಮಾತನಾಡಿ, ವಿದ್ಯುತ್ ಇಲ್ಲದಿದ್ದರೂ ಕನಿಷ್ಟ ವಿದ್ಯುತ್ ದರವನ್ನು ಪಾವತಿಸಬೇಕಾದ ಅನಿವಾರ್ಯತೆ ಇದೆ ಎಂದು ಗಮನ ಸೆಳೆದರು. ಕಳ್ಳಂಗಡ ಮೋಹನ್ ಭೀಮಯ್ಯ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಜಯ ಮಾತನಾಡಿದರು.
ಈ ಸಂದರ್ಭ ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚೀರ ಕಾರ್ಯಪ್ಪ, ಕುಟ್ಟದ ಬೊಳ್ಳೆರ ಮುದ್ದಪ್ಪ ,ನಾಲ್ಕೇರಿಯ ಚೆಟ್ಟಮಾಡ ಅನಿಲ್, ಬೀರುಗದ ಲವಕುಶಾಲಪ್ಪ, ಕುಟ್ಟ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ, ಬೊಳ್ಳೆರ ವಿನಯ್, ಬೋಡಂಗಡ ನರೇಂದ್ರ, ಸಿ.ಎ. ರಘು, ಶ್ರೀಮಂಗಲದ ಬಾದುಮಂಡ ರಾಜಪ್ಪ, ತಡಿಯಂಗಡ ಗಣೇಶ್, ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್, ಅಜ್ಜಮಾಡ ಶಂಭು, ಮಚ್ಚಮಾಡ ರಂಜಿ, ಬಾಚಂಗಡ ಮುದ್ದಪ್ಪ ಅವರು ಮಾತನಾಡಿದರು.
ಮಾಣೀರ ಮುತ್ತಪ್ಪ ಸ್ವಾಗತಿಸಿ, ಕೊಡಗು ಬೆಳೆಗಾರ ಒಕ್ಕೂಟ ಶ್ರೀಮಂಗಲ ಹೋಬಳಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ ವಂದಿಸಿದರು.