ಮಡಿಕೇರಿ, ಜು. ೩೧: ಮಕ್ಕಳ ಬೇಕು-ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವನ್ನು ಎಚ್ಚರಿಸುವ ಕೆಲಸ ಮಾಧ್ಯಮ ಮಾಡಬೇಕು. ಜನರ ಆಶೋತ್ತರ, ಬೇಕು ಬೇಡಿಕೆಗಳನ್ನು ಆಡಳಿತಕ್ಕೆ ಪತ್ರಿಕೆಗಳು ತಲುಪಿಸುತ್ತಿವೆ. ತನಗೆ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆ ಸಹಾಯ ಮಾಡುತ್ತಿದೆ. ಇದರಿಂದ ಗ್ರಾಮದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆಡಳಿತ ಕಾರ್ಯೋನ್ಮುಖಗೊಳ್ಳುತ್ತದೆ. ವ್ಯವಸ್ಥೆಯ ವಿರುದ್ಧ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆ, ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಂದರ್ಭದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದೆ. ವ್ಯಕ್ತಿತ್ವ ವಿಕಸನದಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದೆ. ಶಿಕ್ಷಣ ದೊಡ್ಡ ಅಸ್ತç ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸರಕಾರದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಶಿಕ್ಷಣ ವ್ಯವಸ್ಥೆಗೆ ಪೂರಕ ಅನುದಾನ ದೊರೆಯುತ್ತಿದೆ. ಇದನ್ನು ಬಳಸಿಕೊಳ್ಳುವಂತೆ ಕರೆ ನೀಡಿದ ಅವರು, ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅವರ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡಲಿದೆ. ನವೆಂಬರ್ ೧೪ ರಿಂದ
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಮಕ್ಕಳ ಗ್ರಾಮಸಭೆಗಳು ಆರಂಭವಾಗಲಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಉದ್ಯಮಿ ಕದ್ದಣಿಯಂಡ ಹರೀಶ್ ಬೋಪಣ್ಣ, ಪತ್ರಕರ್ತರು ಸವಾಲುಗಳ ನಡುವೆ ಕೆಲಸ ಮಾಡುತ್ತಿದ್ದಾರೆ. ಆಡಳಿತದಲ್ಲಿ ತಪ್ಪು ಕಂಡು ಬಂದರೆ, ಸಮಾಜದ ಸ್ವಾಸ್ಥö್ಯ ಕೆಡಿಸುವವರನ್ನು ಎಚ್ಚರಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತಿದೆ. ಇಡೀ ಸಮಾಜದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಶಕ್ತಿ ಮಾಧ್ಯಮಕ್ಕಿದೆ. ಕಷ್ಟದ ಪರಿಸ್ಥಿತಿಯಲ್ಲಿ, ತಾಂತ್ರಿಕತೆ ಇಲ್ಲದ ಸಮಯದಲ್ಲಿ ಪತ್ರಿಕೆಗಳು ಸಮಾಜಕ್ಕಾಗಿ ಕೆಲಸ ಮಾಡಿವೆ. ಇಂಟರ್‌ನೆಟ್ ಪ್ರಭಾವದ ನಡುವೆ ಪತ್ರಿಕೆಗಳು ಪಾವಿತ್ರö್ಯತೆ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದ ಅವರು, ಇದುವರೆಗೂ ೪೫ ಸಾವಿರ ಪುಸ್ತಕ ವಿತರಣೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಮಾಜದ ಪ್ರತಿಬಿಂಬ ಮಾಧ್ಯಮಗಳಾಗಿದ್ದು, ವೈಯಕ್ತಿಕ ಹಿತಾಸಕ್ತಿ ಬಿಟ್ಟು ಪೂರ್ವಾಗ್ರಹ ಪೀಡಿತರಾಗದೆ ವಿದ್ಯಮಾನಗಳನ್ನು ಜನತೆಗೆ ಪತ್ರಕರ್ತರು ಮುಟ್ಟಿಸಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಮಾಧ್ಯಮ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಆದರೆ, ಸಾಮಾಜಿಕ ಜಾಲತಾಣಗಳಿಂದ ಎಲ್ಲರೂ ವರದಿಗಾರರು ಆಗುತ್ತಿದ್ದಾರೆ. ಇದು ಸಮಾಜಕ್ಕೆ ಮಾರಕವಾಗಿದೆ. ಸರಕಾರ ಸಾಮಾಜಿಕ ಜಾಲತಾಣದ ಬಗ್ಗೆ ನಿಯಂತ್ರಣ ಹೇರಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಜಂಜಾಟದ ನಡುವೆ ಪತ್ರಕರ್ತರು ಕೆಲಸ ಮಾಡುತ್ತಾರೆ. ಕೊರೊನಾ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಸುಳ್ಳು ಸುದ್ದಿಗಳು ಪ್ರಚಾರವಾಗುತ್ತಿವೆ. ವಿಶ್ವಾಸಾರ್ಹತೆಯನ್ನು ನಾವು ಉಳಿಸಬೇಕು. ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಬೇಕು. ಹಲವು ವಿಚಾರಗಳ ಪತ್ರಕರ್ತರಿಂದ ನೊಂದವರಿಗೆ ನ್ಯಾಯ ದೊರೆತಿದೆ ಎಂದು ತಿಳಿಸಿದ ಅವರು, ಪ್ರತಿಭಾ ಪುರಸ್ಕಾರ ಮಾದರಿ ಕಾರ್ಯಕ್ರಮ. ಇದರಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳಿಗೆ ವಿನಯ, ಸಂಸ್ಕೃತಿ ಕಲಿಸಬೇಕು. ಪಾಶ್ಚಿಮಾತ್ಯ ಪ್ರಭಾವದಿಂದ ಸಂಸ್ಕೃತಿ ಮರೆಯುತ್ತಿದ್ದಾರೆ. ವೈದ್ಯಕೀಯ, ಇಂಜಿನಿಯರಿAಗ್ ಕ್ಷೇತ್ರವಲ್ಲದೆ ಹಲವು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ ಅದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪ್ರಾಕೃತಿಕ ವಿಕೋಪ, ಕೊರೊನಾ ಪರಿಸ್ಥಿತಿಯಿಂದ ಪ್ರತಿಭಾ ಪುರಸ್ಕಾರ ನಡೆಸಲಾಗಲಿಲ್ಲ. ಸನ್ಮಾನ, ಪುರಸ್ಕಾರಗಳು ಮಕ್ಕಳ ಸಾಧನೆಗೆ ಅಡಿಗಲ್ಲಾಗುತ್ತದೆ ಎಂದರು. ಕಾರ್ಯಕ್ರಮ ಸಂಚಾಲಕ ಹೆಚ್.ಜೆ. ರಾಕೇಶ್ ಮಾತನಾಡಿದರು.
ಶೈಕ್ಷಣಿಕವಾಗಿ ಸಾಧನೆ ಮಾಡಿದ ಬಾಚರಣಿಯಂಡ ಪರಿಧಿ ಪೊನ್ನಮ್ಮ, ಎಸ್.ಪಿ.ಚಿತ್ತಾರ, ಎಸ್.ಪಿ.ಇಂಚರ, ತಿಷ್ಯಾ, ಈಶ್ವಾನಿ, ಲಕ್ಷಿತಾ ಕೆ.ಎಸ್. ನಿವೇದ್ ಬಾಲಾಜಿ, ಧರುಣ್, ಸಂಸ್ಕೃತಿ, ಕೆ.ಜಿ.ಶಿವಾನಿ, ವಿ.ಎ.ಚಿಂತನ್, ಮಚ್ಚಮಾಡ ಆಯುಷ್ ಕುಟ್ಟಪ್ಪ, ಮಚ್ಚಮಾಡ ಆಕಾಶ್ ಚಿಟ್ಟಿಯಪ್ಪ, ಅಜ್ಜಿನಿಕಂಡ ಡಾನ್ ನಾಚಯ್ಯ, ಶಶಾಂಕ್ ಬೋಪಣ್ಣ, ದೀಕ್ಷಾ, ಸಮರ್ಥ್, ಚೇತನಾ ರೈ, ಸಮೃದ್ದಿ, ರಕ್ಷನ್, ಹಿಮಾನಿ, ಎ.ಇಂಚರ, ರೋಷನ್ ಸೇರಿದಂತೆ ೬೦ ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿರುವ ಕುಶಾಲನಗರದ ಪ್ರಕಾಶ್ ಹಾಗೂ ರಾಜ್ಯ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಚುನಾಯಿತರಾದ ಭವಾನಿ ಸಿಂಗ್ ಠಾಕೂರ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಅನುಕಾರ್ಯಪ್ಪ, ಪದಾಧಿಕಾರಿಗಳು, ನಿರ್ದೇಶಕರುಗಳು ಪಾಲ್ಗೊಂಡಿದ್ದರು. ರೇಖಾ ಗಣೇಶ್ ಪ್ರಾರ್ಥಿಸಿ, ವಿಷ್ಮಾ ಪೆಮ್ಮಯ್ಯ ಸ್ವಾಗತಿಸಿ, ಕಿಶೋರ್ ರೈ ನಿರೂಪಿಸಿದರೆ, ಮಲ್ಲಿಕಾರ್ಜುನ್ ವಂದಿಸಿದರು.