ಸೋಮವಾರಪೇಟೆ, ಜು. ೩೦: ಇಲ್ಲಿನ ಪುಷ್ಪಗಿರಿ ರೈತ ಉತ್ಪಾದಕರ ಸಂಸ್ಥೆ ಹಾಗೂ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ವಿವಿಧೆಡೆ ರೈತರಿಗೆ ಸಮಗ್ರ ಕೃಷಿ ನಿರ್ವಹಣೆಯ ಕುರಿತು ಕಾರ್ಯಾಗಾರ ನಡೆಯಿತು.
ತಾಲೂಕಿನ ಕೂತಿ, ತೋಳೂರುಶೆಟ್ಟಳ್ಳಿ ಹಾಗೂ ಕಾಗಡಿಕಟ್ಟೆಯಲ್ಲಿ ಕಾರ್ಯಾಗಾರ ನಡೆಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಪ್ರಮುಖ ದೇವಯ್ಯ ಮಾತನಾಡಿ, ರಸಗೊಬ್ಬರಗಳ ಅವಶ್ಯಕತೆ ಹಾಗೂ ಮಣ್ಣು ಪರೀಕ್ಷೆಯ ಅಗತ್ಯತೆ ಕುರಿತು ಮಾಹಿತಿ ನೀಡಿದರು. ಬೆಳೆಗಳಲ್ಲಿ ಕೀಟ ನಿರ್ವಹಣೆ ಮತ್ತು ಬೆಳೆಗಳಿಗೆ ಬರುವ ರೋಗಗಳಿಗೆ ಪರಿಹಾರ ಕ್ರಮ ಹಾಗೂ ಬೋರ್ಡೋ ದ್ರಾವಣದ ಉಪಯೋಗದ ಕುರಿತು ವಿಜ್ಞಾನಿ ವೀರೇಂದ್ರ ಕುಮಾರ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜಿ. ರಮೇಶ್ ವಹಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಸತೀಶ್, ಉಪಾಧ್ಯಕ್ಷ ಎಂ.ಎನ್. ಅಶೋಕ್ ಹಾಗೂ ನಿರ್ದೇಶಕರುಗಳಾದ ಡಾ.ಶಶಿಕಾಂತ್ ರೈ, ಮಂಜುಳ, ದಯಾನಂದ ಉಪಸ್ಥಿತರಿದ್ದರು.