ಗೋಣಿಕೊಪ್ಪ ವರದಿ, ಜು. ೩೦: ಮೈತಾಡಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಸೇವೆಗೆ ಮರು ಚಾಲನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವೀರಾಜಪೇಟೆ ತಾಲೂಕಿಗೆ ಒಳಪಡುವ ಗ್ರಾಮದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಪಡಿತರ ಚೀಟಿದಾರರು ಇದ್ದಾರೆ. ಸುಮಾರು ೫೦ ವರ್ಷಗಳಿಂದ ಇದ್ದ ನ್ಯಾಯಬೆಲೆ ಅಂಗಡಿ ಸೇವೆ ೨೦೧೩ ರಲ್ಲಿ ಸ್ಥಗಿತಗೊಳಿಸಿ, ಕಾಕೋಟುಪರಂಬು ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಸ್ಥಳಾಂತರಿಸಲಾಗಿತ್ತು. ಇದೀಗ ವರ್ಷಂಪ್ರತಿ ಪ್ರವಾಹ ಸಂದರ್ಭ ೬-೭ ಕಿ.ಮೀ. ದೂರವಿರುವ ಕಾಕೋಟುಪರಂಬು ಗ್ರಾಮಕ್ಕೆ ತೆರಳಿ ಪಡಿತರ ತರಬೇಕಾದ ಸಂಕಷ್ಟ ಎದುರಾಗಿದೆ. ಹಿರಿಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಕೂಡಲೇ ಸೇವೆಯನ್ನು ಮೈತಾಡಿ ಗ್ರಾಮಕ್ಕೆ ನೀಡಿ ಮರು ಚಾಲನೆ ನೀಡಬೇಕು ಎಂದು ಗ್ರಾಮಸ್ಥ ಮುಂಡಚಾಡೀರ ಭರತ್ ಒತ್ತಾಯಿಸಿದ್ದಾರೆ.