ಪಾಲಿಬೆಟ್ಟ, ಜು. ೩೦: ವಿದ್ಯತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆ ಹೊತ್ತಿ ಉರಿದು ಅಪಾರ ಪ್ರಮಾಣದ ಹಾನಿಯಾದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ಗಾಂಧಿಹಳ್ಳಿ ಸಮೀಪದಲ್ಲಿ ಬೋಸ್ ಎಂಬವರಿಗೆ ಸೇರಿದ ಮನೆಯಲ್ಲಿ ಹಂಸ ಎಂಬವರು ಬಾಡಿಗೆಗಿದ್ದು. ಇಂದು ಮಧ್ಯಾಹ್ನದ ವೇಳೆ ಮನೆಯ ವಿದ್ಯುತ್ ಸರ್ವೀಸ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು, ಮನೆಯ ಮುಂಭಾಗದಲ್ಲಿದ್ದ ಪಾಸ್ಟಿಕ್ ಹೊದಿಗೆ ಹೊತ್ತಿ ಉರಿದಿದ್ದು, ಬಳಿಕ ಬೆಂಕಿ ಮನೆಗೆ ವ್ಯಾಪಿಸಿದೆ. ಪರಿಣಾಮ ಮನೆಯ ಒಳಭಾಗದಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದೆ. ಮನೆಯಲ್ಲಿ ನಗದು ಸೇರಿದಂತೆ ಚಿನ್ನಾಭರಣಗಳು ಇದ್ದವು ಎನ್ನಲಾಗಿದ್ದು, ಮರದ ಪೀಠೋಪಕರಣಗಳು, ಬಟ್ಟೆ ಇತ್ಯಾದಿ ಸಂಪೂರ್ಣ ಬೂದಿಯಾಗಿದೆ. ಸ್ಥಳೀಯರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಗೋಣಿಕೊಪ್ಪ ಅಗ್ನಿಶಾಮಕ ದಳದ ಠಾಣಾಧಿಕಾರಿ ಪಳಂಗಪ್ಪ ಹಾಗೂ ತಂಡ ಆಗಮಿಸಿ ಬೆಂಕಿಯನ್ನು ನಂದಿಸಿತು. ಸ್ಥಳಕ್ಕೆ ಸಹಾಯಕ ಠಾಣಾಧಿಕಾರಿ ದೇವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯಲ್ಲಿ ಯಾರೂ ಇರಲಿಲ್ಲವಾದ್ದ ರಿಂದ ದೊಡ್ಡ ಅನಾಹುತ ತಪ್ಪಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಸ್ಕ್ ನಿರ್ಲಕ್ಷ : ಆರೋಪ
ಕಳೆದ ಕೆಲವು ದಿನಗಳಿಂದ ವಿದ್ಯುತ್ ಕಂಬದಿAದ ಹಂಸ ವಾಸವಾಗಿರುವ ಮನೆಗೆ ಬರುವ ಸರ್ವೀಸ್ ತಂತಿ ತಳಮಟ್ಟದಿಂದ ಹಾದುಹೋಗಿದ್ದು, ಆಗಿಂದಾಗೆ ವಿದ್ಯುತ್ ಶಾರ್ಟ್ ಆಗುತ್ತಿದ್ದವು. ಈ ಬಗ್ಗೆ ಸೆಸ್ಕ್ ಸಿಬ್ಬಂದಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹಂಸ ತಿಳಿಸಿದ್ದಾರೆ. ವಿದ್ಯುತ್ ಇಲಾಖೆ ಸೂಕ್ತ ಸಮಯದಲ್ಲಿ ಮನೆಗೆ ಬರುವ ತಂತಿಯ ದೋಷ ಸರಿಪಡಿಸಿದ್ದರೆ ದುರಂತ ನಡೆಯುತ್ತಿರಲಿಲ್ಲ ಎಂದು ಅವರು ತಿಳಿಸಿದರು.
- ಪುತ್ತಂ ಪ್ರದೀಪ್