ಗೋಣಿಕೊಪ್ಪಲು, ಜು. ೨೯: ರೈತರಿಗೆ ೧೦ ಹೆಚ್‌ಪಿ ಮೋಟಾರ್‌ಗೆ ಉಚಿತ ವಿದ್ಯುತ್ ನೀಡುವ ಸರಕಾರದ ತೀರ್ಮಾನವನ್ನು ಬಿಜೆಪಿ ಕೃಷಿ ಮೋರ್ಚಾ ಸ್ವಾಗತಿಸಿದೆ ಎಂದು ವೀರಾಜಪೇಟೆ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಳಿಸಿದ್ದಾರೆ.
ಗೋಣಿಕೊಪ್ಪಲುವಿನ ಬಿಜೆಪಿ ಕಚೇರಿಯಲ್ಲಿ ಕೃಷಿ ಮೋರ್ಚಾದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಜು. ೧ರಿಂದ ೧೦ ಹೆಚ್.ಪಿ. ಮೋಟರ್‌ಗೆ ಬಳಕೆ ಮಾಡಿದ ತಮ್ಮ ವಿದ್ಯುತ್ ಬಿಲ್ಲನ್ನು ಸೆಸ್ಕ್ ಇಲಾಖೆಗೆ ಸಲ್ಲಿಸಬೇಕು. ನಂತರ ರೈತರ ಬ್ಯಾಂಕ್ ಖಾತೆಗಳಿಗೆ ವಿದ್ಯುತ್ ಬಿಲ್ಲಿನ ಹಣ ಸಬ್ಸಿಡಿ ರೂಪದಲ್ಲಿ ಸರ್ಕಾರದ ವತಿಯಿಂದ ಮರುಪಾವತಿ ಆಗಲಿದೆ. ಈ ಯೋಜನೆಯು ಸಣ್ಣ ಹಾಗೂ ಮಧ್ಯಮ ವರ್ಗದ ಕೃಷಿಕರಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದರು.
ಸರ್ಕಾರಿ ಜಾಗದಲ್ಲಿರುವ ರೈತರು ಜಾಗವನ್ನು ಸಕ್ರಮ ಮಾಡಿಕೊಳ್ಳಲು ಈಗಾಗಲೇ ಸರ್ಕಾರ ಫಾರಂ ನಂ. ೫೭ನ್ನು ಸಲ್ಲಿಸಲು ಅವಕಾಶ ನೀಡಿದೆ. ಮುಂದಿನ ಮಾರ್ಚ್ ತಿಂಗಳ ತನಕ ಈ ಯೋಜನೆಯು ಚಾಲ್ತಿಯಲ್ಲಿರುತ್ತದೆ. ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ಕೃಷಿ ಮೋರ್ಚಾದ ವೀರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ತೋರೆರ ವಿನು ಹಾಗೂ ಖಜಾಂಚಿ ಅಣ್ಣಾಳಮಾಡ ನವೀನ್ ಉಪಸ್ಥಿತರಿದ್ದರು.