ಪೊನ್ನಂಪೇಟೆ, ಜು. ೨೯: ಮಳೆಯ ಪ್ರಮಾಣ ಇದೀಗ ಕಡಿಮೆ ಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೇರಿರುವ ಭಾರಿ ವಾಹನಗಳ ಸಾಗಾಟ ನಿಷೇಧವನ್ನು ಹಿಂಪಡೆಯ ಬೇಕು. ಕಳೆದ ೨ ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗಿ ತತ್ತರಿಸಿ ಇದೀಗ ಚೇತರಿಕೆ ಹಂತದಲ್ಲಿದ್ದ ಲಾರಿ ಮಾಲೀಕರಿಗೆ ಈ ನಿಷೇಧದಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಕೊಡಗು ಜಿಲ್ಲಾ ಮರ ಮತ್ತು ಮರಲಾರಿ ವ್ಯಾಪಾರಿಗಳ ಸಂಘ ತನ್ನ ಅಳಲನ್ನು ತೋಡಿಕೊಂಡಿದೆ.
ಈ ಕುರಿತು ಸಂಘದ ಅಧ್ಯಕ್ಷ ಎಂ.ಎ. ಶಮೀರ್ ಅವರ ನೇತೃತ್ವದ ನಿಯೋಗವೊಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಜಿಲ್ಲೆಯ ಕೃಷಿಕರ, ಅವಲಂಬಿತ ಕೂಲಿ ಕಾರ್ಮಿಕರ ಮತ್ತು ಲಾರಿ ಮಾಲೀಕರ ಸಂಕಷ್ಟವನ್ನು ಅರ್ಥೈಸಿಕೊಂಡು ತಮ್ಮ ಆದೇಶವನ್ನು ಉದ್ಯಮಕ್ಕೆ ಪೂರಕವಾಗಿ ಪರಿಷ್ಕರಿಸಬೇಕೆಂದು ಕೋರಿತು.
ಜಿಲ್ಲಾಡಳಿತದ ಈ ನಿರ್ಬಂಧ ದಿಂದಾಗಿ ಕೊಡಗಿನ ಸಾಮಾನ್ಯ ರೈತರ ಮತ್ತೊಂದು ಆದಾಯದ ಮೂಲವಾಗಿರುವ ಸಿಲ್ವರ್ ಓಕ್ ಮರಗಳ ಸಾಗಾಟ ಕೂಡ ಇದೀಗ ಸಾಧ್ಯವಾಗುತ್ತಿಲ್ಲ. ಹಲವಾರು ರೈತರು ಆರ್ಥಿಕ ಸಂಕಷ್ಟದಿAದಾಗಿ ತಮ್ಮ ತೋಟದಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ಮಾರಾಟ ಮಾಡಿದ್ದಾರೆ. ಅಲ್ಲದೆ ಮಳೆ ಮತ್ತು ತೋಟಗಳಲ್ಲಿ ಸಾಕಷ್ಟು ಸಿಲ್ವರ್ ಮರಗಳು ನೆಲಕ್ಕುರುಳಿವೆ.
ಆದರೆ ಇದೀಗ ಸಾಗಾಟ ಮಾಡಲು ಸಾಧ್ಯವಾಗದೆ ಅವುಗಳೆಲ್ಲ ತೋಟಗಳಲ್ಲಿ ಬಿದ್ದಿದೆ. ಇದರಿಂದಾಗಿ ಮಾರಾಟ ಮಾಡಿದ ರೈತರು ಮತ್ತು ಖರೀದಿಸಿದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಶಮೀರ್ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಕಾರ್ಮಿಕರು ಹಿಂದಿನಿAದಲೂ ಮರಗೆಲಸವನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದರು. ಜಿಲ್ಲಾಡಳಿತದ ನಿಷೇಧದಿಂದಾಗಿ ಈ ಅವಲಂಬಿತರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರ ದೈನಂದಿನ ಬದುಕಿಗೂ ಸಮಸ್ಯೆಯಾಗಿದೆ. ಬಹುತೇಕ ಲಾರಿ ಮಾಲೀಕರು ತಮ್ಮ ಲಾರಿಯ ಸಾಲದ ತಿಂಗಳ ಕಂತನ್ನು ಕೂಡ ಈ ಸಂಕಷ್ಟದಿAದಾಗಿ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಶಮೀರ್ ವಿವರಿಸಿದರು. ನಿಯೋಗದಲ್ಲಿದ್ದ ಸಂಘದ ಪ್ರಮುಖರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಮಾತನಾಡಿ, ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಜಿಲ್ಲಾಡಳಿತ ನಿಷೇಧ ಹೇರುವುದು ಸರಿಯಲ್ಲ. ಯಾವ ರಸ್ತೆ ಅಪಾಯದಲ್ಲಿಯೋ ಆ ಮಾರ್ಗದಲ್ಲಿ ನಿರ್ಬಂಧ ಹೇರಲಿ ಎಂದು ಕೋರಿದರು.
ನಿಯೋಗದಲ್ಲಿ ಸುಂಟಿಕೊಪ್ಪದ ಎಂ.ಎ. ಉಸ್ಮಾನ್, ಸಂಘದ ಪದಾಧಿಕಾರಿಗಳಾದ ರೂಪೇಶ್, ವಾಟೇರಿರ ದಿನು, ಮುಳ್ಳೂರು ಅಭಿ, ಸುಬೈರ್, ರಫೀಕ್, ಆಶಿಫ್, ಖಾದರ್ ಮೊದಲಾದವರು ಇದ್ದರು.