ಶನಿವಾರಸಂತೆ, ಜು. ೩೦: ವಿಶ್ವ ಹಿಂದೂ ಪರಿಷತ್, ಭಜರಂಗದಳ ಇತರ ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಂದೀಶ್ವರ ಕಲ್ಯಾಣ ಮಂಟಪದಿAದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ನಡೆಯಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.
ನಂತರ ನಡೆದ ಸಭೆಯಲ್ಲಿ ಬಿಜೆಪಿ ಮುಖಂಡ ಎಸ್.ಎನ್. ರಘು, ಭಜರಂಗದಳದ ಜಿಲ್ಲಾ ಸಂಚಾಲಕ ಅನೀಶ್ ಕುಮಾರ್, ತಾಲೂಕು ಸಂಚಾಲಕ ಜೀವನ್ ಮಾತನಾಡಿ, ಪ್ರವೀಣ್ ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಮೆರವಣಿಗೆ ಮೂಲಕವೇ ಕಂದಾಯ ಇಲಾಖೆ ಕಚೇರಿಗೆ ತೆರಳಿ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್‌ರಾಜ್ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಧನಂಜಯ್, ಕಾರ್ಯದರ್ಶಿ ವಿನಯ್, ಸಂಚಾಲಕ ತನ್ಮಯ್, ಪ್ರಚಾರ್ ಪ್ರಮುಖ್ ಸತ್ಯ, ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್ ಕುಮಾರ್, ತಾಲೂಕು ಸಂಚಾಲಕ ಜೀವನ್, ಗೋರಕ್ಷಕ ಶಿವಸ್ವಾಮಿ, ಮುಖಂಡರಾದ ಎಸ್.ಎನ್. ರಘು, ಯತೀಶ್, ನಿತಿನ್, ಸೋಮಶೇಖರ್, ದಿನೇಶ್, ಯೋಗಾನಂದ್, ಸೂರಿ, ತಾಳೂರು ಪುನೀತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕರಾದ ಎಸ್. ಪರಶಿವಮೂರ್ತಿ, ಮೇದಪ್ಪ, ಹರೀಶ್ ಪ್ರತಿಭಟನಾ ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಂಡಿದ್ದರು.