ಮಡಿಕೇರಿ, ಜು. ೨೮: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿAದ ಜಿಲ್ಲೆಯ ವಿವಿಧೆಡೆ ಇಂದು ಪ್ರತಿಭಟನೆ ನಡೆಯಿತು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ದುರ್ಗಾವಾಹಿನಿ, ಮಾತೃಮಂಡಳಿಯ ಸಂಯಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಮುಖ ವಿನಯ್, ಪ್ರವೀಣ್ ನೆಟ್ಟಾರು ಹತ್ಯೆ ಸಂಬAಧ ಕಠಿಣ ನಿಲುವುಗಳನ್ನು ತಳೆದು ಹಂತಕರನ್ನು ಬಗ್ಗು ಬಡಿಯಬೇಕಾದ ಸರ್ಕಾರ ‘ಕಠಿಣ ಕ್ರಮ’ ಎಂಬ ಹೇಳಿಕೆಗಳಿಗಷ್ಟೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಸಮಾಜದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಂಧಿತ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಜೈಲಿನಿಂದ ಆತ ವೀಡಿಯೋ ಕಾಲ್ ಮಾಡುವುದನ್ನು ಕೂಡ ತಡೆಯಲಾಗದ ಸ್ಥಿತಿಯಲ್ಲಿ ಇಂದಿನ ಸರ್ಕಾರವಿದೆ ಎಂದು ದೂಷಿಸಿದರು.

ಪ್ರಸ್ತುತ ರಾಜ್ಯದಲ್ಲಿರುವ ಗೃಹ ಸಚಿವರು ಅಸಹಾಯಕ ಸಚಿವರಾಗಿದ್ದರೆ, ಮುಖ್ಯಮಂತ್ರಿಗಳು ನಿಸ್ಸಹಾಯಕರಾಗಿದ್ದಾರೆ ಎಂದು ಟೀಕಿಸಿದರು. ಅಂದು ಡಿಜೆ ಹಳ್ಳಿ ಮತ್ತು ಜೆಜಿ ಹಳ್ಳಿಗಳಲ್ಲಿ ಪೊಲೀಸ್ ಠಾಣೆಗಳಿಗೆ ಬೆಂಕಿ ಬಿದ್ದಾಗ ಮೌನವಾಗಿದ್ದ ಪೊಲೀಸರು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂದರ್ಭ ನ್ಯಾಯಕ್ಕಾಗಿ ಆಗ್ರಹಿಸಿದ ಹಿಂದೂ ಕಾರ್ಯ ಕರ್ತರನ್ನು ಥಳಿಸಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.

ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆಗೈದವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ವಿನಯ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಹಿಂಪ ಪ್ರಮುಖರಾದ ಪುದಿಯೊಕ್ಕಡ ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಉಣ್ಣಿ ಕೃಷ್ಣ, ನಗರಾಧ್ಯಕ್ಷ ಮನು ಮಂಜುನಾಥ್, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಅರುಣ್ ಶೆಟ್ಟಿ, ಸಬಿತಾ, ಶ್ವೇತ, ಜಗದೀಶ್, ಅರುಣ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.ವೀರಾಜಪೇಟೆ ನಗರ ಬಿಜೆಪಿ, ಸಂಘ ಪರಿವಾರದ ಸದಸ್ಯರು ಗಡಿಯಾರ ಕಂಬದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಬಿಜೆಪಿ ಸರ್ಕಾರ ಹಾಗೂ ಗೃಹಮಂತ್ರಿ ವಿರುದ್ಧ ಧಿಕ್ಕಾರ ಕೂಗಿ ಡಿವೈಎಸ್‌ಪಿ ನಿರಂಜನ್‌ರಾಜೆ ಅರಸ್ ಅವರಿಗೆ ಮನವಿ ಸಲ್ಲಿಸಿದರು.

ಸಂಘ ಪರಿವಾರದ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಹಿಂದೂಗಳು, ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರುಗಳ ಮೇಲೆ ಹಲ್ಲೆಗಳು ಹಾಗೂ ಹತ್ಯೆಗಳು ನಡೆಯುತ್ತಿವೆೆ. ಗೃಹ ಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಹೆಚ್‌ಪಿ ತಾಲೂಕು ಅಧ್ಯಕ್ಷ ಬಿ.ಎಂ ಕುಮಾರ್, ತಾಲೂಕು ಕಾರ್ಯದರ್ಶಿ ಕೆ. ಯತೀಶ್, ಭಜರಂಗದಳ ಸಂಚಾಲಕ ವಿವೇಕ್ ರೈ, ಹಿಂದೂ ಜಾಗರಣ ವೇದಿಕೆ ಪ್ರಮುಖ ದಿನೇಶ್ ನಾಯರ್, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಪುರಸಭೆ ಅಧ್ಯಕ್ಷೆ ಸುಶ್ಮಿತಾ ಮತ್ತಿತರರು ಉಪಸ್ಥಿತರಿದ್ದರು.ಕುಶಾಲನಗರ ಗಣಪತಿ ದೇವಾಲಯದ ಮುಂಭಾಗ ಸೇರಿದ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರವೀಣ್ ನೆಟ್ಟಾರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಿದರು.

ನಂತರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಪ್ರಮುಖ ಬಿ.ಬಿ. ಭಾರತೀಶ್, ಆರೋಪಿಗಳನ್ನು ಪತ್ತೆ ಹಚ್ಚಿ ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬೆಳ್ಳಾರೆಯಲ್ಲಿ ಮೃತನ ಅಂತ್ಯಕ್ರಿಯೆ ಸಂದರ್ಭ ಕಾರ್ಯಕರ್ತರ ಮೇಲೆ ಲಾಠಿಚಾರ್ಚ್ ಮಾಡಿದ ಪೊಲೀಸರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಡಿ. ಸಂತೋಷ್ ಮಾತನಾಡಿ, ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು. ಹಿಂದೂಗಳ ಮೇಲೆ ಯಾವುದೇ ರೀತಿಯ ಹಲ್ಲೆಗಳು ಮರುಕಳಿಸದಂತೆ ಸರ್ಕಾರ ಕಟ್ಟೆಚ್ಚರ ವಹಿಸಬೇಕೆಂದು ಹೇಳಿದರು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಸುಮನ್, ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ, ಹರ್ಷ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಕುಡ ಅಧ್ಯಕ್ಷ ಎಂ.ಎA.ಚರಣ್, ಪುಂಡರೀಕಾಕ್ಷ, ವೈಶಾಕ್, ಮಧುಸೂಧನ್, ಎಂ.ಎನ್. ಕುಮಾರಪ್ಪ, ಭಜರಂಗದಳದ ಅಧ್ಯಕ್ಷ ಅನೀಶ್, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ನವನೀತ್, ಮಹಿಳಾ ಪ್ರಮುಖರಾದ ಮಂಜುಳ, ಪುಷ್ಪ ಮತ್ತಿತರರು ಇದ್ದರು.