ಮಡಿಕೇರಿ, ಜು. ೨೭: ಕೋವಿಡ್ ವೈರಾಣು ಆಕ್ರಮಣ ದಿಂದ ನಲುಗಿದ್ದ ಜನತೆ ಇದೀಗ ಕೈ, ಕಾಲು, ಬಾಯಿ ಜ್ವರದ ಆತಂಕಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕೈ, ಕಾಲು, ಬಾಯಿ ಜ್ವರ ಕಾಡಲಾ ರಂಭಿಸಿದ್ದು, ಆಸ್ಪತ್ರೆಗಳಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ಪತ್ತೆಯಾಗುತ್ತಿವೆ. ಕೈ, ಕಾಲು, ಬಾಯಿ ರೋಗವೂ ವೈರಸ್‌ನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ‘ಕಾಕ್ಸ್ ಸಾಕಿ’ ವೈರಸ್‌ಗಳಿಂದ ಈ ರೋಗ ಬರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಣ್ಣಿನಲ್ಲಿ ಆಟವಾಡುವುದರಿಂದ ವೈರಾಣು ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದು, ಇದರೊಂದಿಗೆ ನಾನಾ ಕಾರಣಗಳು ಕೂಡ ಇವೆ. ಜಾನುವಾರುಗಳಿಗೆ ಬಾಧಿಸುವ ಈ ವೈರಾಣು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಲವು ಮಕ್ಕಳು ವೈರಸ್‌ಗೆ ತುತ್ತಾಗಿ ಗುಣಮುಖರಾಗಿರುವ ಉದಾಹರಣೆ ಗಳು ಕೂಡ ಇವೆ.
ರೋಗ ಲಕ್ಷಣಗಳು
ಒಂದು ಅಥವಾ ಎರಡು ದಿನದ ಜ್ವರದಿಂದ ಈ ಕಾಯಿಲೆ ಪ್ರಾರಂಭ ವಾಗುತ್ತದೆ ನಂತರ ದದ್ದುಗಳು ಮತ್ತು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕೈ, ಬಾಯಿ ಹಾಗೂ ಕಾಲುಗಳಲ್ಲಿ ದದ್ದುಗಳು ಕಾಣಿಸಿಕೊಂಡು ಗುಧದ್ವಾರದ ತನಕ ತಲುಪುತ್ತವೆ.
ಬಾಯಿಗಳಲ್ಲಿ ಹುಣ್ಣಾಗಿ ಮಕ್ಕಳು ಊಟ ಮಾಡಲು ಕಷ್ಟವಾಗುತ್ತದೆ ಆದರೆ, ಕೈ ಹಾಗೂ ಕಾಲುಗಳಲ್ಲಿನ ಗುಳ್ಳೆಗಳಿಂದಾಗಿ ಸ್ವಲ್ಪ ಪ್ರಮಾಣದ ನೋವು ಉಂಟಾಗಿ ಕಿರಿಕಿರಿ ಯಾಗುತ್ತದೆ. ಸಾಮಾನ್ಯವಾಗಿ ೧೦ಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪ್ರೌಢ ವಯಸ್ಸಿನ ಮಕ್ಕಳಲ್ಲಿಯೂ ಈ ರೋಗ ಬರುತ್ತದೆ. ಆದಾಗ್ಯೂ, ಅಪರೂಪಕ್ಕೊಬ್ಬರಿಗೆ ವಯಸ್ಕರಲ್ಲಿಯೂ ಈ ರೋಗ ತಗುಲುವ ಸಾಧ್ಯತೆ ಇದೆ.
ಆತಂಕ ಬೇಡ - ಎಚ್ಚರಿಕೆ ಅಗತ್ಯ
ಕೈ, ಕಾಲು, ಹಾಗೂ ಬಾಯಿ ರೋಗಗಳು
(ಮೊದಲ ಪುಟದಿಂದ) ಸಾಮಾನ್ಯವಾಗಿ ೫ ರಿಂದ ೭ ದಿನಗಳೊಳಗೆ ಗುಣವಾಗುತ್ತವೆ. ಅದರಷ್ಟಕ್ಕೆ ಅದೇ ಈ ರೋಗಗಳು ಗುಣಮುಖವಾಗುತ್ತವೆೆ. ಚಿಕಿತ್ಸೆ ಇಲ್ಲದೆಯೂ ಕೂಡಾ ಒಂದು ವಾರದೊಳಗೆ ಈ ರೋಗ ಹೋಗಬಹುದು. ಯಾವುದೇ ಕಲೆ ಇಲ್ಲದೆ ಎರಡು ವಾರಗಳ ನಂತರವೂ ಗುಳ್ಳೆಗಳು ಮಾಯವಾಗುತ್ತವೆ. ಈ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಮುಂಜಾಗ್ರತ ಕ್ರಮಗಳು
ಮೂಗಿನ ಸ್ರವಿಸುವಿಕೆ, ಮಲ ಅಥವಾ ಗುಳ್ಳೆಗಳಿಂದ ದ್ರವದಂತಹ ದೈಹಿಕ ವಿಸರ್ಜನೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. ಈ ಸೋಂಕು ಕಾಣಿಸಿಕೊಂಡAತಹ ಮಕ್ಕಳನ್ನು ಒಂದು ವಾರಗಳ ಕಾಲ ಮನೆಯಲ್ಲಿಯೇ ಇಡುವುದರಿಂದ ಮತ್ತೊಬ್ಬರಿಗೆ ಈ ಸೋಂಕು ಹರಡದಂತೆ ತಡೆಗಟ್ಟಬಹುದು. ಕೆಲ ಪ್ರಕರಣಗಳಲ್ಲಿ ೧೧ ವಾರಗಳ ಕಾಲ ಈ ಸೋಂಕು ಮುಂದುವರೆಯಬಹುದು ಅಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಾರದು.
ಪ್ರತಿನಿತ್ಯ ಸಾಬೂನಿನಿಂದ ಕೈ ತೊಳೆಯುವಂತೆ ಹಾಗೂ ಕೈಗಳನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸೂಪರ್ ಮಾರ್ಕೆಟ್‌ಗಳಲ್ಲಿ ಟ್ರಾಲಿ, ಟಾಯ್ಸ್ಗಳನ್ನು ಮುಟ್ಟಿದ್ದ ಸೋಂಕಿತ ಮಕ್ಕಳಿಂದಲೂ ಈ ರೋಗ ಹರಡಿರುವ ಬಗ್ಗೆ ವರದಿಯಾಗಿದೆ. ಆದ್ದರಿಂದ ಇಂತಹ ಸಂದರ್ಭಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.
ಚಿಕಿತ್ಸೆ ಏನು?
ಸಾಮಾನ್ಯವಾಗಿ ಇಂತಹ ರೋಗಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಿಲ್ಲ. ಜ್ವರ ಹಾಗೂ ನೋವಿಗಾಗಿ ವೈದ್ಯರು ಸೂಚಿಸಿದ ಮಾತ್ರೆ ಸೇವಿಸಬೇಕು. ಗುಳ್ಳೆಗಳ ನಿವಾರಣೆಗಾಗಿ ಲೋಷನ್ ಬಳಸಬೇಕು. ಬಾಯಿಯಲ್ಲಿ ಉಣ್ಣಿನಿಂದ ಆಹಾರ ಸೇವನೆ ಕಷ್ಟಕರವಾಗುವುದರಿಂದ ದ್ರವ ಪದಾರ್ಥಗಳ ಸೇವನೆ ಮಾಡಬೇಕು, ಹೆಚ್ಚಾಗಿ ಎಳನೀರು ಕುಡಿಯಬೇಕು. ಉಪ್ಪು ನೀರಿನಲ್ಲಿ ಸ್ನಾನ ಮಾಡಬೇಕು. ಲ್ಯಾವೆಂಡರ್ ಎಣ್ಣೆ ಬಳಸುವುದರಿಂದಲೂ ಹೆಚ್ಚು ಅನುಕೂಲವಾಗುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿಗಳು ಹಾಗೂ ಮಾಂಸಾಹಾರದಿAದ ದೂರವಿರಬೇಕು. -ಹೆಚ್.ಕೆ. ರಾಕೇಶ್.