ವೀರಾಜಪೇಟೆ, ಜು. ೨೭: ಕೇಂದ್ರ ಸರ್ಕಾರವು ಜನಸಾಮಾನ್ಯರು ಬಳಕೆ ಮಾಡುವ ಆಹಾರ ಪದಾರ್ಥಗಳ ಮೇಲೆ ಜಿ.ಎಸ್.ಟಿ ವಿಧಿಸಿರುವುದಲ್ಲದೆ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿದ್ದು, ಇದನ್ನು ಈ ಕೂಡಲೇ ರದ್ದುಪಡಿಸಬೇಕು ಎಂದು ಸಿಪಿಐಎಂ ಲಿಬರೇಶನ್ ಪಕ್ಷದಿಂದ ವೀರಾಜಪೇಟೆ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ೧೪.೫ ಕೆಜಿ ಅಡುಗೆ ಅನಿಲದ ಬೆಲೆ ೧೦೫೦ ರೂಪಾಯಿ ದಾಟಿರುವುದು, ಬಡಮಧ್ಯಮ ವರ್ಗದ ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಬಡವರಿಗಾಗಿ ಉಜ್ವಲ ಗ್ಯಾಸ್ ಯೋಜನೆ ಕೊಟ್ಟ ಕೇಂದ್ರ ಸರ್ಕಾರ ಈಗ ಅನಿಲ ದರ ಹೆಚ್ಚಳ ಮಾಡಿ ಬಡ ಮಹಿಳೆಯರ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತಿದೆ. ಬೆಲೆ ಏರಿಕೆಯಿಂದಾಗಿ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಕೂಡಲೇ ಸಂಬAಧಪಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಲೆ ಕಡಿಮೆ ಮಾಡಬೇಕು ಎಂಬ ಮನವಿಯನ್ನು ತಹಶೀಲ್ದಾರ್ ಯೋಗಾನಂದ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭ ಸಿಪಿಐಎಂ ಲಿಬರೇಶನ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮೋಹನ್, ಪಕ್ಷದ ಅಧ್ಯಕ್ಷ ಸುಬ್ಬು, ಸಹ ಕಾರ್ಯದರ್ಶಿ ತೋರ, ಅದಿವಾಸಿ ಸಂಘಟನೆಯ ಅಧ್ಯಕ್ಷ ರವಿ, ಕಾರ್ಯದರ್ಶಿ ಗೌರಿ ಹಾಜರಿದ್ದರು.