ಮಡಿಕೇರಿ, ಜು. ೨೭: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಂಪಾದಿಸಿರುವ ಅರೆಭಾಷೆ ಪದಕೋಶ ಬಿಡುಗಡೆ ಕಾರ್ಯಕ್ರಮ ತಾ. ೩೦ ರಂದು ನಗರದ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಗಂಟೆ ೧೧.೧೫ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಅರೆಭಾಷೆ ಪದಕೋಶವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೊಂಬಾರನ ಜಿ ಬೋಪಯ್ಯ ಬಿಡುಗಡೆ ಮಾಡಲಿದ್ದಾರೆ. ಪದಕೋಶದ ಬಗ್ಗೆ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತಕುಮಾರ್ ಮಾತನಾಡಲಿದ್ದಾರೆ. ಅತಿಥಿಗಳಾಗಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಸಮಾಜ ಒಕ್ಕೂಟದ ನಿರ್ದೇಶಕ ರಾಜೇಶ್ ತೇನನ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅರೆಭಾಷೆ ವಿದ್ವಾಂಸರ ಸಭೆ ಮಾಡಿ ಸಂಶೋಧನಾ ಸಹಾಯಕರಿಂದ ಕ್ಷೇತ್ರಕಾರ್ಯ ಮಾಡಿಸಿ ಪದ ಸಂಗ್ರಹ ಮಾಡಲಾಯಿತು. ಮದ್ರಾಸ್ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಚೆ.ರಾಮಸ್ವಾಮಿ ಮಾರ್ಗದರ್ಶನದಲ್ಲಿ ಸುಳ್ಯ ಮತ್ತು ಮಡಿಕೇರಿಯಲ್ಲಿ ನವೆಂಬರ್ ೨೦೨೦ರಲ್ಲಿ ಅರೆಭಾಷೆ ಪದಕೋಶ ರಚನೆಗೆ ಪೂರ್ವ ತಯಾರಿ ಸಭೆ ಮತ್ತು ಪದಕೋಶ ತಯಾರಿ ಕಮ್ಮಟವನ್ನು ನಡೆಸಲಾಯಿತು. ಈ ಕಮ್ಮಟದಲ್ಲಿ ೮ ಮಂದಿ ಸಂಶೋಧನಾ ಸಹಾಯಕರು ಸತತ ನಾಲ್ಕು ವಾರಗಳಲ್ಲಿ ೧೪ಸಾವಿರ ಪದಗಳನ್ನು ಸಂಗ್ರಹಿಸಿಕೊಟ್ಟರು. ಅಲ್ಲದೆ ಈಗಾಗಲೇ ಪ್ರಕಟವಾದ ಕೆ.ಆರ್.ಗಂಗಾಧರರ ಅರೆಭಾಷೆ, ಕನ್ನಡ, ಇಂಗ್ಲಿಷ್ ಶಬ್ದಕೋಶ, ಹಲವಾರು ಸಂಶೋಧನೆ ಮತ್ತು ಪ್ರಕಟಿತ ಪುಸ್ತಕಗಳಿಂದ ಪದಗಳನ್ನು ಸಂಪಾದಿಸಿ ೧೮ ಸಾವಿರ ಪದಗಳನ್ನುಅರೆಭಾಷೆ ಪದಕೋಶದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು. ಸಿದ್ಧಪಡಿಸಿರುವ ಅರೆಭಾಷೆ ಪದಕೋಶದಲ್ಲಿ ೧೫೦೦ ಕ್ಕಿಂತ ಹೆಚ್ಚು ಗಾದೆಗಳು ೭೫೦ಕ್ಕಿಂತ ಹೆಚು ಒಗಟು ನುಡಿಗಟ್ಟುಗಳು ಹಾಗೂ ೧೮ ಸಾವಿರ ಪದಗಳಿಗೂ ಪ್ರಯೋಗ ವಾಕ್ಯಗಳನ್ನು ನೀಡಲಾಗಿದೆ. ಪದಕೋಶದಲ್ಲಿ ೯೦೦ಕ್ಕಿಂತ ಹೆಚ್ಚು ಮನೆತನ, ೧೦೦೦ಕ್ಕಿಂತ ಹೆಚ್ಚು ಸ್ಥಳನಾಮ ಹಾಗೂ ೧೫೦ಕ್ಕಿಂತ ಹೆಚ್ಚು ವ್ಯಕ್ತಿ ನಾಮಗಳು ಇವೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮರಾಘವಯ್ಯ, ಧನಂಜಯ ಅಗೋಳಿಕಜೆ ಹಾಜರಿದ್ದರು.