ಗೋಣಿಕೊಪ್ಪಲು, ಜು.೨೬: ದ.ಕೊಡಗಿನ ವಿವಿಧ ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೆ, ಬೆಳೆಗಾರರಲ್ಲಿ, ರೈತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗುತ್ತಿದೆ. ರೈತರ ಕಾಫಿ ತೋಟದಲ್ಲಿ ಬೆಳೆದಿರುವ ಹಲಸಿನ ಹಣ್ಣನ್ನು ಅರಸಿ ಬರುತ್ತಿರುವ ಕಾಡಾನೆ ಹಿಂಡು ಮಂಗಳವಾರ ಮುಂಜಾನೆ ತಿತಿಮತಿ ಸಮೀಪದ ಕಲ್ಲಳ್ಳ ಎಂಬ ಗ್ರಾಮದ ರೈತರ ತೋಟದಲ್ಲಿ ಒಮ್ಮೆಲೆ ಕಾಣಿಸಿಕೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಯಿತು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಪೊನ್ನಂಪೇಟೆ ತಾಲೂಕು ರೈತ ಸಂಘದ ಪ್ರಮುಖರು ತಿತಿಮತಿ ಅರಣ್ಯ ವಲಯದ ಎಸಿಎಫ್ ಉತ್ತಪ್ಪ ಹಾಗೂ ಆರ್‌ಎಫ್‌ಒ ಅಶೋಕ್ ಹುನಗುಂದ ಅವರನ್ನು ಬರಮಾಡಿಕೊಂಡು ತೋಟದಲ್ಲಿ ನೆಲೆಸಿದ್ದ ೨೦ಕ್ಕೂ ಅಧಿಕ ಕಾಡಾನೆಗಳನ್ನು ಸಮೀಪದ ಹೆಬ್ಬಾಲೆ ಅರಣ್ಯ ಪ್ರದೇಶಕ್ಕೆ ಅಟ್ಟುವ ಕೆಲಸ ಆರಂಭಿಸಿದರು. ಆದರೆ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಲು ಹಿಂದೇಟು ಹಾಕಿದವು.
ಕಲ್ಲಳ್ಳ, ಭದ್ರಗೊಳ, ಹೆಬ್ಬಾಲೆ ಭಾಗದ ರೈತರಾದ ವಾಟೇರಿರ ವಿನು, ಕಾಣತಂಡ ನವೀನ್, ವಿ.ಸಿ.ರಾಜು, ಎಂ.ಪಿ.ನಾರಾಯಣ, ಮನೆಯಪಂಡ ಚಿಣ್ಣಪ್ಪ ಹಾಗೂ ದೇವರಪುರ ಮಂಜು ಇವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಸಾಕಷ್ಟು ಹಾನಿ ಮಾಡಿವೆ. ೨೦ ಆನೆಗಳ ಗುಂಪಿನಲ್ಲಿ ಮರಿಯಾನೆಯು ಇರುವುದರಿಂದ ತೋಟಗಳೆಲ್ಲವೂ ಬಹುತೇಕ ಹಾನಿಗೊಳಗಾಗಿವೆ. ಮುಂಜಾನೆ ೭ ಗಂಟೆ ಸುಮಾರಿಗೆ ಈ ಭಾಗದಲ್ಲಿ ಒಂಟಿ ಆನೆಯು ಸಾರ್ವಜನಿಕರಿಗೆ ಕಾಣಿಸಿಕೊಂಡಿತ್ತು. ಸಮಯ ಕಳೆಯುತ್ತಿ ದ್ದಂತೆ ಒಂದರ ಹಿಂದೆ ಮತ್ತೊಂದು ಆನೆಗಳು ಸೇರಿಕೊಂಡು ತೋಟ ದೊಳಗೆ ನುಸುಳಿದವು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಯಿತು.
ಅರಣ್ಯ ಅಧಿಕಾರಿಗಳನ್ನು ಹಾಗೂ ಇತರ ಸಿಬ್ಬಂದಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಸಿಬ್ಬಂದಿಗ ಳೊಂದಿಗೆ ರೈತ ಸಂಘದ ಪದಾಧಿಕಾರಿ ಗಳು ಕಾಡಾನೆಗಳ ಹಿಂಡನ್ನು ರೈತರ ಕಾಫಿ ತೋಟಗಳಿಂದ ಹೆಬ್ಬಾಲೆ ಸಮೀಪದ ಅರಣ್ಯ ಪ್ರದೇಶಕ್ಕೆ ಅಟ್ಟುವ ಕಾರ್ಯ ಕೈಗೆತ್ತಿಕೊಂಡರು. ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಗಳ ಗುಂಪನ್ನು ಚದುರಿಸಿ ತಿತಿಮತಿ ಪಾಲಿಬೆಟ್ಟ ರಸ್ತೆಯ ಮಾರ್ಗವಾಗಿ ಹೆಬ್ಬಾಲೆ ಅರಣ್ಯ ಭಾಗಕ್ಕೆ ಅಟ್ಟುವ ಕಾರ್ಯ ನಡೆಸಿದರು. ಈ ವೇಳೆ ತಿತಿಮತಿ ಪಾಲಿಬೆಟ್ಟ ರಸ್ತೆಯನ್ನು ಕೆಲ ಕಾಲ ಪೊಲೀಸರು ಬಂದ್ ಮಾಡಿದ್ದರು.
ಕಾಫಿ ತೋಟದಲ್ಲಿದ್ದ ೨೦ಕ್ಕೂ ಅಧಿಕ ಕಾಡಾನೆಗಳ ಹಿಂಡನ್ನು ಪಟಾಕಿ ಸಿಡಿಸಿ ರಸ್ತೆಮೂಲಕ ಕರೆ ತಂದು ಹೆಬ್ಬಾಲೆ ಅರಣ್ಯಕ್ಕೆ ಇನ್ನೇನು ಬಿಡುವಷ್ಟರಲ್ಲಿ ದಿಢೀರನೆ ಕಾಡಾನೆಗಳ ಹಿಂಡು ಗಾಬರಿಗೊಂಡು ಸಮೀಪದ ಕಾಫಿ ತೋಟಕ್ಕೆ ಲಗ್ಗೆ ಇಟ್ಟವು. ಎರಡನೇ ಬಾರಿ ಮರಳಿ ಪ್ರಯತ್ನ ಮಾಡುವ ಮೂಲಕ ತೋಟದಲ್ಲಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದರು. ಸಂಜೆ ವೇಳೆ ಕಾಡಾನೆಗಳ ಗುಂಪು ಹೆಬ್ಬಾಲೆ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕಿತು. ಕಲ್ಲಳ್ಳ ಮಾರ್ಗದ ಅಂಗನವಾಡಿ ಮುತ್ತಪ್ಪ ದೇವಾಲಯ ಬಳಿ ಸುಮಾರು ಒಂದು ಕಿ.ಮೀ. ಕಂದಕ ನಿರ್ಮಾಣವಾಗದೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿದ್ದ ಕಾಡಾನೆಗಳ ಹಿಂಡು ಒಮ್ಮೆಲೆ ಈ ಗ್ರಾಮದತ್ತ ಆಗಮಿಸಿ ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿತ್ತು.
ಸ್ಥಳಕ್ಕೆ ಆಗಮಿಸಿದ ತಿತಿಮತಿ ವಲಯ ಎಸಿಎಫ್ ಉತ್ತಪ್ಪ ಅವರಿಗೆ ಈ ಭಾಗದಲ್ಲಿ ಆನೆ ಕಂದಕವನ್ನು ನಿರ್ಮಿಸಲು ಕೂಡಲೇ ಕ್ರಮಕೈಗೊಳ್ಳ ಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್ ಹಾಗೂ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಆಗ್ರಹಿಸಿದರು. ರೈತ ಸಂಘದ ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ತಿತಿಮತಿ ಭಾಗದ ಮುಖಂಡರಾದ ಸತೀಶ್, ಅಶ್ವಥ್, ಬೋಪಣ್ಣ, ಮತ್ತೂರು ಗ್ರಾಮದ ಮಧು, ಕಿರುಗೂರಿನ ಪುನೀಂದ್ರ ಇನ್ನಿತರ ಪ್ರಮುಖರು ತಿತಿಮತಿ ಉಪಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಈ ಭಾಗದಲ್ಲಿ ಹಲವು ಗುಂಪುಗಳಲ್ಲಿ ಕಾಡಾನೆಗಳು ಅರಣ್ಯ ಹಾಗೂ ಕಾಫಿ ತೋಟದಲ್ಲಿ ಕಾಣಿಸಿ ಕೊಳ್ಳುತ್ತಿರುವುದರಿಂದ ನಾಗರಿಕರು ಎಚ್ಚರಿಕೆಯನ್ನು ವಹಿಸುವಂತೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಆದಷ್ಟು ಬೇಗನೆ ಹೆಬ್ಬಾಲೆ ಪಟ್ಟಣಕ್ಕೆ ತೆರಳುವ ಮಾರ್ಗದಲ್ಲಿ ಗೇಟನ್ನು ನಿರ್ಮಿಸಿ ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಅರಣ್ಯ ಪ್ರದೇಶದಿಂದ ಆನೆಗಳು ಗ್ರಾಮಕ್ಕೆ ಆಗಮಿಸದಂತೆ ಎಚ್ಚರ ವಹಿಸಲು ಈ ಭಾಗದಲ್ಲಿ ಒಂದು ವಾರದೊಳಗೆ ಆನೆ ಕಂದಕ ನಿರ್ಮಾಣ ಮಾಡಲಾಗುವು ದೆಂದು ಎಸಿಎಫ್ ಉತ್ತಪ್ಪ ಭರವಸೆ ನೀಡಿದರು.