ವೀರಾಜಪೇಟೆ, ಜು. ೨೬: ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ ೨೩ನೇ ವಾರ್ಷಿಕೋತ್ಸವದ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವೀರಾಜಪೇಟೆಯ ತಾಲೂಕು ಮೈದಾನದ ಬಳಿಯಿರುವ ಯೋಧರ ಸ್ಮಾರಕದ ಬಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಎರಡು ನಿಮಿಷಗಳ ಮೌನಾಚರಣೆಯ ಮೂಲಕ ನಮನ ಸಲ್ಲಿಸಲಾಯಿತು.
ವೀರಾಜಪೇಟೆ ತಾಲೂಕು ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್, ಬಿಲ್ಲವ ಸಮಾಜ, ಸ್ಟೇಟ್ ಬ್ಯಾಂಕ್, ವೀರಾಜಪೇಟೆ ಪುರಸಭೆ, ಹೆಗ್ಗಡೆ ಸಮಾಜದ ಪ್ರಮುಖರು ಪುಷ್ಪನಮನದೊಂದಿಗೆ ಗೌರವ ಅರ್ಪಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿಮಾಡ ನಂಜಪ್ಪ, ಉಪಾಧ್ಯಕ್ಷ ಚಪ್ಪಂಡ ಹರೀಶ್, ಮಾಜಿ ಅಧ್ಯಕ್ಷ ಪುಗ್ಗೇರ ನಂದಾ, ಮಾಜಿ ಉಪಾಧ್ಯಕ್ಷ ಕರುಂಬಯ್ಯ, ಸಂಘದ ನಿರ್ದೇಶಕ ಹೆಚ್.ಕೆ ಅಪ್ಪಯ್ಯ, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ ಗಣೇಶ್, ಹೆಗ್ಗಡೆ ಸಮಾಜದ ಅಧ್ಯಕ್ಷ ಪಿ.ಜಿ ಅಯ್ಯಪ್ಪ, ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕಿ ಉಮಾ, ಲಯನ್ಸ್ ಕ್ಲಬ್ ಅಧ್ಯಕ್ಷ ನರೇಂದ್ರ, ಬಿಜೆಪಿ ಪ್ರಮುಖರಾದ ರೀನಾಪ್ರಕಾಶ್ ಮತ್ತಿತ್ತರು ಯೋಧರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಗೌರವ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಕಾರ್ಗಿಲ್ ವಿಜಯ ದಿವಸದ ಮಹತ್ವದ ಬಗ್ಗೆ ಮಾತನಾಡುತ್ತಾ, ಕಾರ್ಗಿಲ್ ಯುದ್ಧದಲ್ಲಿ ಯೋಧರನ್ನು ಕಳೆದುಕೊಂಡ ಕುಟುಂಬದವರಿಗೆ ದುಃಖವನ್ನು ಭರಿಸುವ ಆತ್ಮಸ್ಥೆöÊರ್ಯವನ್ನು ಆ ದೇವರು ನೀಡಲಿ, ಅಲ್ಲದೇ ಆ ಯೋಧರ ತ್ಯಾಗ, ಬಲಿದಾನಗಳು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು. ವೀರಾಜಪೇಟೆಯ ಜನಪ್ರಿಯ ಡೆಲ್ಲಿ ಸ್ವೀಟ್ಸ್ ಬೇಕರಿಯ ರಾಮು ಎಲ್ಲರಿಗೂ ಸಿಹಿ ವಿತರಿಸಿದರು.