(ಕೆ.ಎಂ. ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಜು. ೨೫: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ, ಜಿಲ್ಲೆಯ ಬಹುತೇಕ ಜಲಪಾತಗಳು ಭೋರ್ಗರೆಯುತ್ತ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಜಲಪಾತಗಳ ವೀಕ್ಷಣೆ ಮಾಡಲು ಬರುವ ಪ್ರವಾಸಿಗರು ತಮ್ಮ ಹುಚ್ಚಾಟವನ್ನು ಮೆರೆದು ಅಪಾಯ ತಂದೊಡ್ಡುವ ಸಂಭವ ಎದುರಾಗುತ್ತಿದೆ.

ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರು ತಮ್ಮ ಹುಚ್ಚಾಟವನ್ನು ಮೆರೆಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣವಾದ ಇನ್ಸಾ÷್ಟಗ್ರಾಮ್‌ನಲ್ಲಿ ಹರಿದಾಡುತ್ತಿದೆ.

ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರು ಹೋಂ ಗಾರ್ಡ್ ಇಲ್ಲದ ಸಮಯ ನೋಡಿ, ಬೇಲಿಯನ್ನು ಹಾರಿ ಜಲಪಾತದ ಸಮೀಪವೇ ನಿಂತು ನೃತ್ಯ ಹಾಗೂ ಫೋಟೋ ಕ್ಲಿಕ್ಕಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಲಪಾತದ ಬಳಿಯಿಂದ ಕೊಂಚ ಎಡವಿದರೆ ಅಪಾಯ ಗ್ಯಾರಂಟಿ. ಮಲೆನಾಡ ಪಶ್ಚಿಮ ಘಟ್ಟ ಪ್ರದೇಶದ ಪುಷ್ಪಗಿರಿ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಹುಟ್ಟಿ ಹರಿಯುವ ನದಿ, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಬೀದಳ್ಳಿಯ ಸಮೀಪದ ಮಲ್ಲಳ್ಳಿಯಲ್ಲಿ ಜಲಪಾತವಾಗಿ ಹರಿಯುವ ಕುಮಾರಧಾರ ನದಿಯು ಸೋಮವಾರಪೇಟೆಯಿಂದ ೨೫ ಕೀ.ಮೀ ದೂರದಲ್ಲಿದೆ. ನದಿಯು ಮಳೆಯಿಂದ ತುಂಬಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಹಾಲ್ನೊರೆ ಸೂಸುತ್ತ ಮೈದುಂಬಿ ಹರಿದು ಪ್ರವಾಸಿಗರನ್ನು ಮಲ್ಲಳ್ಳಿ ಜಲಪಾತ ತನ್ನತ್ತ ಸೆಳೆಯುತ್ತಿದೆ.

ಹೆಸರಿಗಷ್ಟೇ ಹೋಂ ಗಾರ್ಡ್

ಮಲ್ಲಳ್ಳಿ ಜಲಪಾತದಲ್ಲಿ ಯಾವುದೇ ಅಪಾಯ ಸಂಭವಿಸದಿರಲು, ಪ್ರವಾಸೋದ್ಯಮ ಇಲಾಖೆ ಇಬ್ಬರು ಹೋಂ ಗಾರ್ಡ್ಗಳನ್ನು ನೇಮಿಸಿದೆ. ಆದರೆ ಈ ಇಬ್ಬರು ಹೋಂ ಗಾರ್ಡ್ಗಳು ಹೆಸರಿಗೆ ಮಾತ್ರ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಹುತೇಕ ಸಮಯದಲ್ಲಿ ಹೋಂ ಗಾರ್ಡ್ಗಳು ಜಲಪಾತದ ಬಳಿ ಇರುವುದೇ ಇಲ್ಲ.

ಇದರಿಂದ ಪ್ರವಾಸಿಗರು ಬೇಲಿಯನ್ನು ಹಾರಿ ಜಲಪಾತಕ್ಕಿಳಿಯುವ ಸಾಹಸಕ್ಕೆ ಮುಂದಾಗಿ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಅಲ್ಲದೇ ಜಲಪಾತದ ಸಮೀಪದಲ್ಲೇ ಇರುವ ಬಂಡೆ ಕಲ್ಲುಗಳ ಮೇಲೆ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಬಂಡೆ ಕಲ್ಲುಗಳ ಮೇಲಿಂದ ಜಾರಿ ಬಿದ್ದರೆ ಮೃತದೇಹ ಕೂಡ ಸಿಗುವುದಿಲ್ಲ.

ಆದರೂ ಕೂಡ ಯಾವುದೇ ಭಯವಿಲ್ಲದೆ ಈಗಲೂ ಕೂಡ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವುದು ಆತಂಕದ ಸಂಗತಿಯಾಗಿದೆ.

ಸೆಲ್ಫೀ ಹುಚ್ಚಿಗೆ ಇನ್ನೆಷ್ಟು ಬಲಿ ಬೇಕು?

ದಿನನಿತ್ಯ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವು, ಸೆಲ್ಫೀ ಕ್ಲಿಕ್ಕಿಸುವಾಗ ಜಾರಿ ಬಿದ್ದು ಸಾವನ್ನಪ್ಪಿದರು ಎಂಬಿತ್ಯಾದಿ ಸುದ್ದಿಗಳನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಆದರೂ ಕೂಡ ಪ್ರವಾಸಿಗರು ಹಾಗೂ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟವೇ ಸರಿ.

ಮಲ್ಲಳ್ಳಿ ಜಲಪಾತದಲ್ಲಿ ೨೦೦೧ ರಿಂದ ಇದುವರೆಗೆ ೧೨ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ಮಲ್ಲಳ್ಳಿ ಜಲಪಾತದ ಬಗ್ಗೆ ಪ್ರಚಾರವಿರಲಿಲ್ಲ. ಈ ಸಮಯದಲ್ಲಿ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದರು. ಸೋಮವಾರಪೇಟೆ ತಾಲೂಕಿನ ಬಾಣವಾರ ಸಮೀಪದ ರಾಗಿಣಿ ಎಂಬ ಯುವತಿ ತನ್ನ ಗೆಳತಿಯೊಂದಿಗೆ ಫೋಟೋ ಕ್ಲಿಕ್ಕಿಸುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಳು. ತನ್ನ ಗೆಳತಿ ಜಾರಿ ಬೀಳುವುದನ್ನು ಕಣ್ಣೆದುರಲ್ಲೇ ಕಂಡ ಗೆಳತಿ ಅವಳು ಕೂಡ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಇದು ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಿದ ಮೊದಲ ಸಾವು.

ಹಲವಾರು ಎಚ್ಚರಿಕೆ ಫಲಕಗಳು

ಪ್ರವಾಸಿಗರು ನೀರಿಗಿಳಿಯದಂತೆ ಮೆಸ್ ಅಳವಡಿಸಿ, ಇಬ್ಬರು ಹೋಂ ಗಾರ್ಡ್ಗಳನ್ನು ಪ್ರವಾಸೋದ್ಯಮ ಇಲಾಖೆ ನೇಮಕ ಮಾಡಿದರೂ ಸಹಾ ಇವರ ಕಣ್ತಪ್ಪಿಸಿ ಸೆಲ್ಫೀ ಗೀಳಿಗೆ ಪ್ರವಾಸಿಗರು ಮಲ್ಲಳ್ಳಿ ಜಲಪಾತದಲ್ಲಿ ನೀರಿಗಿಳಿದು ಹುಚ್ಚಾಟ ಮೆರೆಯುತ್ತಿದ್ದಾರೆ.

ಕೊಡಗಿನವರದ್ದೇ ಹುಚ್ಚಾಟ...

ಕಳೆದ ಮೂರು ದಿನಗಳ ಹಿಂದೆ ಇನ್ಸಾ÷್ಟ್ಟಗ್ರಾಮ್ ಸ್ಟೋರಿಯಲ್ಲಿ ಹರಿದಾಡುತ್ತಿದ್ದ, ವೀಡಿಯೋ ಕೊಡಗು ಜಿಲ್ಲೆಯ ಯುವಕರ ಗುಂಪಿನದ್ದು. ಜಿಲ್ಲೆಯ ಹತ್ತಕ್ಕೂ ಹೆಚ್ಚು ಯುವಕರು ಜಲಪಾತಕ್ಕಿಳಿಯದಂತೆ ಅಳವಡಿಸಿರುವ ಮೆಸ್ ಹಾರಿ ಜಲಪಾತದ ಬಳಿಯಿರುವ ಬಂಡೆ ಕಲ್ಲುಗಳ ಮೇಲೆ ನಿಂತು ಫೋಟೋ ಕ್ಲಿಕ್ಕಿಸುವ ಹಾಗೂ ನೃತ್ಯ ಮಾಡುವ ವೀಡಿಯೋ ಹರಿದಾಡುತ್ತಿದ್ದು, ಇದರ ಬಗ್ಗೆ ಜಿಲ್ಲೆಯ ಜನರು ಕೂಡ ಆತಂಕ ವ್ಯಕ್ತಪಡಿಸಿದ್ದರು. ಇತರೆ ಜಿಲ್ಲೆ ಹಾಗೂ ರಾಜ್ಯದ ಪ್ರವಾಸಿಗರಿಗೆ ಮಾದರಿಯಾಗಬೇಕಾದ ಜಿಲ್ಲೆಯ ಜನರೇ ಪ್ರವಾಸಿ ತಾಣಗಳಲ್ಲಿ ಹುಚ್ಚಾಟ ಮೆರೆಯುತ್ತಿದ್ದಾರೆ.