ಗೋಣಿಕೊಪ್ಪಲು, ಜು.೨೫: ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಲವಿದ್ಯುತ್ ಹಾಗೂ ಸೋಲಾರ್ ನಿಂದ ಹೆಚ್ಚಿನ ವಿದ್ಯುತ್ ಗಳಿಸಲು ವಿಶೇಷ ಪ್ರಯತ್ನ ನಡೆಸಿದೆ. ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ವಿದ್ಯುತ್ ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಉಜ್ವಲ ಭಾರತ, ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಜಿ.ಬೋಪಯ್ಯ, ಸೋಲಾರ್‌ನಿಂದ ಹೆಚ್ಚಿನ ವಿದ್ಯುತ್ ಪಡೆಯಲು ಅವಕಾಶವಿರುವುದರಿಂದ ಸೋಲಾರ್ ಘಟಕ ಸ್ಥಾಪಿಸಲು ವಿಶೇಷ ರೀತಿಯ ಉತ್ತೇಜನ ನೀಡಲಾಗುತ್ತಿದೆ, ಕೊಡಗಿನಲ್ಲಿ ಜಲವಿದ್ಯುತ್‌ಗೆ ವಿಫುಲ ಅವಕಾಶವಿದ್ದರೂ ಕೆಲವರು ಜಲವಿದ್ಯುತ್ ಯೋಜನೆಗೆ ಅಡ್ಡಪಡಿಸು ತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಇಂತಹ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ರೀತಿಯ ವಿದ್ಯುತ್ ನೀಡುವ ಸಲುವಾಗಿ ಯೋಜನೆಗಳು ನಡೆಯುತ್ತಿವೆ. ಆಯಾ ಭಾಗದಲ್ಲಿರುವ ವಿದ್ಯುತ್ ಘಟಕಗಳನ್ನು ಆಧುನೀಕರಣ ಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದ ಸೆಸ್ಕ್ ಇಲಾಖೆಗೆ ೩ ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಸಾವಿರಾರು ವಿದ್ಯುತ್ ಕಂಬಗಳು, ನೂರಾರು ಟ್ರಾನ್ಸ್ ಫಾರ್ಮ್ರ್‌ಗಳು ಹಾಳಾಗಿದ್ದರೂ, ಜಿಲ್ಲೆಯ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದುರಸ್ತಿಪಡಿಸಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವೋಲ್ಟೇಜ್ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬಂದಿವೆ.

ಇವುಗಳನ್ನು ಬಗೆ ಹರಿಸಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಹಕರೊಂದಿಗೆ ಸೆಸ್ಕ್ ಸಿಬ್ಬಂದಿಗಳು, ಅಧಿಕಾರಿಗಳು ಉತ್ತಮ ಒಡನಾಟವಿಟ್ಟುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಹೇಳಿದರು.

ಕೊಡಗು ಜಿಲ್ಲೆಯಿಂದ ಗ್ರಾಹಕರು ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ಲನ್ನು ಸೆಸ್ಕ್ಗೆ ಜಮಾವಣೆ ಮಾಡುತ್ತಿದ್ದಾರೆ. ಉಳಿದ ಜಿಲ್ಲೆಗಳಿಗಿಂತ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಿಲ್ಲನ್ನು ಇಲ್ಲಿನ ಗ್ರಾಹಕರು ಸಕಾಲದಲ್ಲಿ ಇಲಾಖೆಗೆ ಸಲ್ಲಿಸುತ್ತಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಅನ್ನು ಒದಗಿಸಲು ಆದ್ಯತೆ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಡ ಜನತೆ ವಿದ್ಯುತ್ ಬೆಳಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಿ ೨೦೨೪ರ ಒಳಗೆ ಪ್ರತಿ ಮನೆಗಳಿಗೆ ವಿದ್ಯುತ್ ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶ ಎಂದರು. ಈ ವೇಳೆ ಬೆಳಕು ಯೋಜನೆ, ಸೌಭಾಗ್ಯ ಹಾಗೂ ಡಿಡಿಯುಜಿಜೆವೈ ಫಲಾನುಭವಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ, ಬೆಂಗಳೂರಿನ ಸೀನಿಯರ್ ಚೀಫ್ ಪ್ರೋಗ್ರಾಂ ಆಫೀಸರ್ ಅಜರುದ್ದೀನ್, ಸೆಸ್ಕ್ನ ಮೈಸೂರು ಮುಖ್ಯ ಇಂಜಿನಿಯರ್ ಉಮೇಶ್ ಚಂದ್ರ, ಅಧೀಕ್ಷಕ ಇಂಜಿನಿಯರ್ ಎಲ್. ಸೋಮರಾಜು, ಮಡಿಕೇರಿ ಕಾರ್ಯಪಾಲಕ ಇಂಜಿನಿಯರ್ ಎಸ್. ಅನಿತಾಬಾಯಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನೆಗಳ ವಿದ್ಯುದ್ದೀಕರಣ, ಜಾಗತಿಕ ಅವಕಾಶಗಳು, ಗ್ರಾಮ ವಿದ್ಯುದ್ದೀಕರಣ, ವಿತರಣ ಜಾಲ ಬಲಪಡಿಸುವುದು, ಬೆಳಕು ಕಾರ್ಯಕ್ರಮ ಫಲಾನುಭವಿಗಳ ಸಂವಾದ, ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು, ಒಂದು ರಾಷ್ಟç, ಒಂದೇ ಜಾಲ ಎಂಬ ವಿಷಯದ ಬಗ್ಗೆ ಅಧಿಕಾರಿಗಳು ಮಾಹಿತಿ ಒದಗಿಸಿದರು. ಬೀದಿ ನಾಟಕ, ಗ್ರಾಹಕರ ಹಕ್ಕುಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗೋಣಿಕೊಪ್ಪ ಸೆಸ್ಕ್ನ ಎಇಇ ನೀಲ್‌ಶೆಟ್ಟಿ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಭಾಗದ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸಂಘ ಸಂಸ್ಥೆಯ ಪ್ರಮುಖರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.