ಗೋಣಿಕೊಪ್ಪಲು, ಜು.೨೫: ಕೊಡಗು ಹಿಂದೂ ಮಲಯಾಳಿ ಸಮಾಜದ ಆಡಳಿತ ಮಂಡಳಿಗೆ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಅಮೃತ್‌ರಾಜ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿ.ವಿ. ಅರುಣ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೆ.ಪಿ.ಪ್ರಶಾಂತ್, ಕಾರ್ಯದರ್ಶಿಯಾಗಿ ಸಿ.ಕೆ. ವೇಣುಗೋಪಾಲ್, ಖಜಾಂಜಿಯಾಗಿ ಎ.ಕೆ. ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲುವಿನ ಸಂಘದ ಕಚೇರಿಯಲ್ಲಿ ಚುನಾವಣೆ ಪ್ರಕ್ರೀಯೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಸಂಘದ ಹಿರಿಯ ಸದಸ್ಯರಾದ ಶಾಜಿ ಅಚ್ಚುತ್ತನ್ ಕಾರ್ಯ ನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಅಜಿತ್, ಸಂಘದ ಹಿರಿಯ ಸದಸ್ಯರಾದ ಸುಬ್ರಮಣಿ, ಕೆ.ಡಿ.ಸುನೀಲ್, ರೀನಾ ಉಮೇಶ್, ಶ್ರೀಜಾಪ್ರದೀಪ್, ಪುಷ್ಪ ಮನೋಜ್, ಸೌಮ್ಯ ಕೃಷ್ಣ, ಪ್ರಿಯ ಸುರೇಂದ್ರ, ಅಶೋಕ್, ಪ್ರಸಾದ್, ಅಖಿಲ್, ರಾಜಶೇಖರ್, ಟಿ.ಸಿ. ಪ್ರಭಾಕರ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮೃತ್‌ರಾಜ್ ಮಾತನಾಡಿ, ಸಮಾಜದ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.