ಚೆಟ್ಟಳ್ಳಿ, ಜು. ೨೫: ಕೊಡಗು ಸೇವಾ ಕೇಂದ್ರ, ಕೊಡವ ಟ್ರಸ್ಟ್ ಮಡಿಕೇರಿಯ ಆಶ್ರಯದಲ್ಲಿ ಸೂರ್ಲಬ್ಬಿ ಶಾಲಾ ಮಕ್ಕಳಿಗೆ, ರೈನ್‌ಕೋಟ್, ಬ್ಯಾಗ್, ಸ್ವೇಟರ್, ಪೇಪರ್, ಪುಸ್ತಕ, ಪೆನ್, ಪೆನ್ಸಿಲ್ ಹಾಗೂ ಇನ್ನಿತರ ವಿದ್ಯಾರ್ಥಿ ಕಲಿಕಾ ಸಲಕರಣೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಸೇವಾ ಕೇಂದ್ರದ ಕಾರ್ಯದರ್ಶಿ ಪ್ರಮೋದ್ ಸೋಮಯ್ಯ ಮಾತನಾಡಿ, ಮುಂದೆ ಬರುವ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಸಾಮಗ್ರಿಗಳನ್ನು ನಾವು ವಿತರಿಸುತ್ತೇವೆ. ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾರ್ಜನೆ ಮಾಡಿ ಸಮಾಜದಲ್ಲಿ ಒಳ್ಳೆ ನಾಗರಿಕರಾಗಿ ಮುಂದೆ ಇನ್ನಷ್ಟು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತಾಗಬೇಕು ಎಂದರು.
ಸೂರ್ಲಬ್ಬಿ ಶಾಲೆಗೆ ಸುತ್ತಮುತ್ತಲಿನ ಹತ್ತಾರು ಕಿಲೋಮೀಟರು ದೂರದ ಕುಗ್ರಾಮದಿಂದ ಮಕ್ಕಳು ಬರುತ್ತಿದ್ದು, ಅಲ್ಲಿನ ನಿರಂತರ ಮಳೆ ಗಾಳಿ, ಚಳಿಗೆ ಬಡ ಮಕ್ಕಳು ತತ್ತರಿಸಿ ಶಾಲೆಯನ್ನು ತ್ಯಜಿಸುತ್ತಿದ್ದರು. ಹಾಗಾಗಿ ಶಾಲೆ ಮುಚ್ಚುವಂತಹ ಪರಿಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡ ಅವರಿಗೆ ಕೊಡವ ಟ್ರಸ್ಟ್ ಹಲವಾರು ವರ್ಷದಿಂದ ಶಾಲೆಗೆ ತೆರಳುವುದಕ್ಕೆ ಒಂದು ಬಾಡಿಗೆ ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಹಲವಾರು ಸಮಸ್ಯೆಯಿಂದ ಈಗ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನಿರ್ವಹಣೆಯ ಆಶ್ರಯದಲ್ಲಿ ಕೊಡವ ಟ್ರಸ್ಟ್ ಶಾಲೆಗೆ ಒಂದು ೧೫ ಆಸನವುಳ್ಳ ಸ್ವಂತ ವಾಹನವನ್ನು ಕೊಡಲು ತೀರ್ಮಾನಿಸಲಾಯಿತು. ಮತ್ತು ಅದರ ನಿರ್ವಹಣೆ ವೆಚ್ಚ ಚಾಲಕನ ಸಂಬಳ ಡೀಸೆಲ್ ಖರ್ಚು ಎಲ್ಲವನ್ನು ಟ್ರಸ್ಟ್ ಭರಿಸುತ್ತದೆ ಎಂದರು.
ಸೂರ್ಲಬ್ಬಿ ಶಾಲೆಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆಯಿದ್ದು, ಅದನ್ನು ನಿವಾರಿಸಲು ಎರಡು ಶಿಕ್ಷಕರನ್ನು ನೇಮಿಸಿ ಅವರ ತಿಂಗಳ ವೇತನವನ್ನು ಕೊಡವ ಟ್ರಸ್ಟ್ ಭರಿಸುತ್ತಿದೆ.
ಕಾರ್ಯಕ್ರಮದಲ್ಲಿ ಕೊಡವ ಟ್ರಸ್ಟ್ ಮತ್ತು ಕೊಡಗು ಸೇವಾ ಕೇಂದ್ರದ ಮುಖ್ಯ ಸಂಚಾಲಕರು ಹಾಗೂ ಉದ್ಯಮಿ ಅಜ್ಜೀನಂಡ ತಮ್ಮು ಪೂವಯ್ಯ, ತೇಲಪಂಡ ಪ್ರಮೋದ್ ಸೋಮಯ್ಯ, ಬೆಳೆಗಾರರಾದ ಮಂದಪAಡ ಸತೀಶ್ ಅಪ್ಪಚ್ಚು, ಪುತ್ತರಿರ ಪಪ್ಪು ತಿಮ್ಮಯ ಉಪಸ್ಥಿತರಿದ್ದರು. ಸಭೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪ್ರೌಢಶಾಲೆ ಹಾಗೂ ಪ್ರಾಥಮಿಕ ಮುಖ್ಯ ಶಿಕ್ಷಕರು ಹಾಜರಿದ್ದರು.