ಸೋಮವಾರಪೇಟೆ, ಜು.೨೪: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣವನ್ನು ನೆರೆಯ ಹಾಸನ ವಿಭಾಗಕ್ಕೆ ಸೇರ್ಪಡೆಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದು, ಈ ಸಂಬAಧಿತ ಮನವಿಯನ್ನು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸಲ್ಲಿಸಲಾಗಿದೆ.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಸಾರಿಗೆ ಬಸ್ ನಿಲ್ದಾಣವನ್ನು ೧೫೦ ಕಿ.ಮೀ. ದೂರವಿರುವ ಪುತ್ತೂರು ವಿಭಾಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೇವಲ ೭೩ ಕಿ.ಮೀ. ದೂರವಿರುವ ಹಾಸನ ವಿಭಾಗಕ್ಕೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಮುಖರಾದ ಅಬ್ದುಲ್ ಅಜೀಜ್, ಸುನಿಲ್, ರಾಮಚಂದ್ರ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಹಾಸನ ವಿಭಾಗಕ್ಕೆ ಒಳಪಡಿಸುವುದರಿಂದ ನೆರೆಯ ರಾಜ್ಯಗಳು ಹಾಗೂ ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಮೂಡಬಿದ್ರೆ, ಉಡುಪಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಬಸ್ಗಳ ಸಂಖ್ಯೆಯೂ ಹೆಚ್ಚಳವಾಗಿ ಸಾರ್ವಜನಿಕರಿಗೆ ಸೇವೆ ಲಭಿಸಲಿದೆ.
ಇದೀಗ ಪುತ್ತೂರು ವಿಭಾಗಕ್ಕೆ ಒಳಪಟ್ಟಿರುವುದರಿಂದ ಸಮರ್ಪಕವಾದ ಸೇವೆ ಸಿಗುತ್ತಿಲ್ಲ. ಮಡಿಕೇರಿ ಘಟಕದಿಂದ ಕೇವಲ ಬೆರಳೆಣಿಕೆಯ ಬಸ್ಗಳು ಓಡಾಡುತ್ತಿವೆ. ಇದುವರೆಗೆ ಸಾರ್ವಜನಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಹಲವಷ್ಟು ನೇರ ಬಸ್ಗಳ ಮಾರ್ಗವನ್ನು ಕಡಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಾಸನ ಜಿಲ್ಲೆಗೆ ಸೇರಿದ ಅರಕಲಗೂಡು, ರಾಮನಾಥಪುರ, ಹೊಳೆನರಸೀಪುರ ಘಟಕಗಳು ಸೋಮವಾರಪೇಟೆಗೆ ಹತ್ತಿರವಿದ್ದು, ಈ ನಿಲ್ದಾಣವನ್ನು ಹಾಸನ ಘಟಕಕ್ಕೆ ಒಳಪಡಿಸುವುದರಿಂದ ಹೆಚ್ಚಿನ ಬಸ್ಗಳು ಓಡಾಡಲಿವೆ. ಇದರೊಂದಿಗೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.