ಮಡಿಕೇರಿ, ಜು. ೨೪: ಮಡಿಕೇರಿ-ಮಂಗಳೂರು ರಸ್ತೆ ಬದಿಯ ಜಿಲ್ಲಾಡಳಿತ ಭವನದ ತಡೆಗೋಡೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ. ಮರಳು ಮೂಟೆ ಅಳವಡಿಸಿದ ನಂತರ ಲಘು ವಾಹನ(ದ್ವಿಚಕ್ರ, ಆಟೋ) ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆ ನಿಟ್ಟಿನಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸಚಿವರು, ತಡೆಗೋಡೆ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭ ದಲ್ಲಿ ಅಲ್ಲಿನ ಸ್ಥಳೀಯರು, ರಸ್ತೆ ಮುಚ್ಚಿರುವುದರಿಂದ ಇಲ್ಲಿನ ಸಾರ್ವಜನಿಕರು ೧೧ ಕಿ.ಮೀ ಬಳಸಿ ಕೊಂಡು ಬರಬೇಕಿದೆ. ಆದ್ದರಿಂದ ಕೂಡಲೇ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ತಡೆಗೋಡೆಯನ್ನು ಅವೈಜ್ಞಾನಿಕ ವಾಗಿ ನಿರ್ಮಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರ ಕಚೇರಿಗೆ ತೆರಳಲು ರಸ್ತೆ ಮಾಡಿದ್ದರ ಪರಿಣಾಮವಾಗಿ ಇಂತಹ ದುಸ್ಥಿತಿ ಎದುರಿಸುವಂತಾಗಿದೆ ಎಂದು ಸ್ಥಳೀಯರೊಬ್ಬರು ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಮಾತನಾಡಿದ ಸಚಿವರಾದ ಬಿ.ಸಿ.ನಾಗೇಶ್ ಅವರು ಸಾರ್ವಜನಿಕರಿಗೆ ತೊಂದರೆ ಆಗದಂತೆ ಗಮನಹರಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಇಇ ನಾಗರಾಜು ಅವರು ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ತಹಶೀಲ್ದಾರ್ ಮಹೇಶ್ ಇತರರು ಇದ್ದರು.