*ಗೋಣಿಕೊಪ್ಪ, ಜು. ೨೪: ಗುಟ್ಕಾ, ತಂಬಾಕು, ಬೀಡಿ, ಸಿಗರೇಟ್ ಮಾರಾಟ ಮಾಡುವ ಅಂಗಡಿ ಮಳಿಗೆಗಳ ಮೇಲೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ದಾಳಿ ನಡೆಸಿ ನಿಯಮಪಾಲನೆ ಮಾಡದ ವ್ಯಾಪಾರಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ಗೋಣಿಕೊಪ್ಪ ಪಟ್ಟಣದ ಮಾರುಕಟ್ಟೆ, ಬೈಪಾಸ್ ಮತ್ತು ಮುಖ್ಯ ಬೀದಿಗಳಲ್ಲಿನ ಅಂಗಡಿಗಳಿಗೆ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿ ಸದಸ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಾಮಫಲಕ ಅಳವಡಿಸದೆ ಇರುವುದು ಮತ್ತು ನೇರವಾಗಿ ಪ್ರದರ್ಶನಕ್ಕೆ ಇಟ್ಟು ಗುಟ್ಕಾ ಮಾರಾಟದಲ್ಲಿ ತೊಡಗಿರುವ ಬಗ್ಗೆ ನಿಯಮ ಉಲ್ಲಂಘನೆಯಡಿಯಲ್ಲಿ ನೂರು ರೂಪಾಯಿಗಳ ದಂಡವನ್ನು ವಿಧಿಸಲಾಯಿತು. ಪ್ರತಿ ಅಂಗಡಿಗಳಲ್ಲಿ ಧೂಮಪಾನ ನಿಷೇಧದ ನಾಮಫಲಕ ಅಳವಡಿಸುವಂತೆ ಸೂಚಿಸಲಾಯಿತು. ಈ ಸಂದರ್ಭ ಅಂಗಡಿಗಳಲ್ಲಿ ಬಳಕೆಯಾಗುತ್ತಿದ್ದ ಪ್ಲಾಸ್ಟಿಕ್‌ಗಳನ್ನು ಗ್ರಾಮ ಪಂಚಾಯಿತಿ ವಶಪಡಿಸಿಕೊಂಡಿತು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಸದಸ್ಯರುಗಳಾದ ರಾಜೇಶ್ ಕೆ., ವಿವೇಕ್ ರಾಯ್ಕರ್, ಹಕೀಮ್, ಮನ್ನಕಮನೆ ಸೌಮ್ಯಬಾಲು, ತಾಲೂಕು ಆರೋಗ್ಯ ನಿರೀಕ್ಷಕ ಶಶಿಕಾಂತ್, ಆರೋಗ್ಯ ಸಹಾಯಕ ಅಧಿಕಾರಿ ಮೋಹನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತೇಜಸ್, ಪಂಚಾಯಿತಿ ಕಾರ್ಯದರ್ಶಿ ಗುರುಶ್ರೀ, ಕರವಸೂಲಿಗಾರ ಸತೀಶ್, ಎ.ಎಸ್.ಐ. ನಂಜಪ್ಪ ಇದ್ದರು.