ಸಿದ್ದಾಪುರ, ಜು ೨೩: ಕಾನೂನು ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡು ತಮಗೆ ಬೇಕಾದ ಗುತ್ತಿಗೆದಾರರಿಗೆ ಸಿದ್ದಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕಾಮಗಾರಿಯನ್ನು ನೀಡುತ್ತಿದ್ದಾರೆ ಎಂದು ಸಿಪಿಐ (ಎಂ) ಪಕ್ಷದ ಮುಖಂಡ ಎನ್.ಡಿ ಕುಟ್ಟಪ್ಪ ಆರೋಪಿಸಿದರು.
ಸಿದ್ದಾಪುರದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನ ಪ್ರಕಾರದಲ್ಲಿ ರೂ ೧ ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿಯನ್ನು ಗುತ್ತಿಗೆದಾರರಿಗೆ ನೀಡಬೇಕಾದರೆ ಅದನ್ನು ಪತ್ರಿಕೆಗಳ ಮೂಲಕ ಟೆಂಡರ್ ಕರೆ ನೀಡಿ ಪ್ರಕ್ರಿಯೆ ಕೈಗೊಳ್ಳಬೇಕು. ಆದರೆ ಅಧ್ಯಕ್ಷರು ಇದನ್ನು ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರದಿಂದ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಿದ್ದಾಪುರ ಗ್ರಾ.ಪಂ.ಯು ಜಿಲ್ಲೆಯಲ್ಲಿ ಅತಿದೊಡ್ಡ ಗ್ರಾ.ಪಂ ಹಾಗೂ ಅಧಿಕ ವರಮಾನವಿರುವ ಗ್ರಾ.ಪಂ ಆಗಿರುತ್ತದೆ. ಆದರೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ಅಭಿವೃದ್ಧಿ ಕಾರ್ಯದ ಬಗ್ಗೆ ಆಸಕ್ತಿ ವಹಿಸದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ದೂರಿದ ಅವರು, ಗ್ರಾ.ಪಂ. ಆಡಳಿತ ಮಂಡಳಿ ಜನಪರವಾಗಿ ನಡೆದುಕೊಳ್ಳುತ್ತಿಲ್ಲ. ಹಲವು ಸಮಸ್ಯೆಗಳು ಪಟ್ಟಣದಲ್ಲಿದ್ದು, ಯಾವುದನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸಮಿತಿ ಮುಖಂಡ ಅಬ್ದುಲ್ ರೆಹಮಾನ್ ಮಾತನಾಡಿ, ಗ್ರಾಮದಲ್ಲಿ ಕಸ ವಿಲೇವಾರಿ ಸಮಸ್ಯೆ ಉಲ್ಭಣಗೊಂಡಿದ್ದು, ರೋಗರುಜಿನ ಹರಡುವ ಆತಂಕ ಇದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ಪಕ್ಷದ ನಗರ ಅಧ್ಯಕ್ಷ ಏಳುಮಲೈ ಹಾಜರಿದ್ದರು.