ಮಡಿಕೇರಿ, ಜು. ೨೩: ಕೊಡಗು ಪ್ರೆಸ್‌ಕ್ಲಬ್, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಪತ್ರಕರ್ತರು ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡರು.

ಕಾವೇರಿ ನದಿಯಲ್ಲಿ ೭ ಕಿ.ಮೀ. ದೂರ ನಡೆದ ರ‍್ಯಾಪ್ಟಿಂಗ್‌ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ೬೩ ಪತ್ರಕರ್ತರು ಪಾಲ್ಗೊಂಡಿದ್ದರು. ಸುದ್ದಿಯ ಒತ್ತಡದಲ್ಲಿರುತ್ತಿದ್ದ ಪತ್ರಕರ್ತರು ರಿವರ್ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ ಸಂಚಾಲಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿಜು ಚಂಗಪ್ಪ, ದುಬಾರೆಯಲ್ಲಿ ಸಾಕಾನೆ ಶಿಬಿರದತ್ತ ತೆರಳಲು ನೀರು ಇದ್ದ ಸಮಯದಲ್ಲಿ ಮಾತ್ರ ಮೋಟಾರ್ ಬೋಟ್ ಬಳಸಲಾಗುತ್ತಿದೆ. ಬೇರೆ ಸಮಯದಲ್ಲಿ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣವಾದರೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸದಾ ಒತ್ತಡದಲ್ಲಿರುವ ಪತ್ರಕರ್ತರಿಗೆ ಇಂತಹ ಕಾರ್ಯಕ್ರಮಗಳು ಒಂದಷ್ಟು ಚೇತರಿಕೆಗೆ ಸಹಕಾರಿಯಾಗಿದೆ. ಪತ್ರಕರ್ತರು ಇಂತಹ ಕಾರ್ಯಕ್ರಮ ದಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತಾಗ ಬೇಕೆಂದು ಕರೆ ನೀಡಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಚಂದ್ರಮೋಹನ್, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಕೆ. ರೆಜಿತ್ ಕುಮಾರ್, ಭಾರತೀಯ ಪತ್ರಕರ್ತರ ಒಕ್ಕೂಟದ ಸದಸ್ಯ ಸುನಿಲ್ ಪೊನ್ನೆಟ್ಟಿ, ದುಬಾರೆ ರ‍್ಯಾಪ್ಟಿಂಗ್ ಅಸೋಸಿಯೇಷನ್ ನಿರ್ದೇಶಕರಾದ ಶಿವರಾಮು, ವಿಜು ಗಣಪತಿ, ಪ್ರಫುಲ್ಲಾ ಮತ್ತಿತರರು ಇದ್ದರು.