ನಾಪೋಕ್ಲು, ಜು. ೨೨: ಸಮೀಪದ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಂಚಿನ ದುರಸ್ತಿ ಕಾರ್ಯ ಕೈಗೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರು ಸೇವೆ ಸಲ್ಲಿಸಿದ್ದಾರೆ.
ಶಾಲೆಯ ಹಳೆಯ ಅಕ್ಷರ ದಾಸೋಹದ ಕೊಠಡಿಯ ಹೆಂಚುಗಳು ಒಡೆದು ಹೋಗಿದ್ದು ಮಳೆ ನೀರಿನ ಸೋರಿಕೆಯಿಂದಾಗಿ ಮರದ ಬಾರಿಗಳೆಲ್ಲವೂ ಗೆದ್ದಲು ಹುಳುಗಳ ಭಾದೆಯಿಂದ ಶಿಥಿಲಾವಸ್ಥೆ ತಲುಪಿತ್ತು. ಇದರಿಂದ ಗೋಡೆಯ ಮೂಲಕ ನೀರು ಬಿದ್ದು ಗೋಡೆಯು ಕುಸಿಯುವ ಮಟ್ಟದಲ್ಲಿತ್ತು. ಶೌರ್ಯ ತಂಡದ ಸದಸ್ಯರು ಗೆದ್ದಲು ಹಿಡಿದ ಮರದ ಪಟ್ಟಿಗಳನ್ನು ಕೆಳಗಿಳಿಸಿ ನಂತರ ಕಬ್ಬಿಣದ ರಾಡ್‌ಗಳನ್ನು ಒಡೆದು ಹಂಚುಗಳನ್ನು ಶುಚಿಗೊಳಿಸಿ ಜೋಡಿಸಿದ್ದಾರೆ. ನೀರು ಗೋಡೆಯ ಮೇಲೆ ಬೀಳದಂತೆ ಸರಿಪಡಿಸಿ ಯಾವುದೇ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಶೌರ್ಯ ತಂಡದ ಸದಸ್ಯರು ನಂತರ ಶಾಲೆಯ ಮುಂಭಾಗದಲ್ಲಿ ಕೆಸರಿನಿಂದ ಕೂಡಿದ ದಾರಿಗೆ ಜೆಲ್ಲಿ ಕಲ್ಲುಗಳನ್ನು ಹಾಕಿ ವಿದ್ಯಾರ್ಥಿಗಳಿಗೆ ನಡೆದಾಡಲು ವ್ಯವಸ್ಥೆ ಮಾಡಿದರು.
ಸೇವಾ ಕಾರ್ಯದಲ್ಲಿ ಶೌರ್ಯ ತಂಡದ ಶಂಕರ್, ಬಿಪಿನ್ ದಾಸ್, ಯೋಗೇಶ್, ಸೀನಾ ಮಾಧವನ್, ಚಂದ್ರಕಲಾ, ಸ್ವಾತಿ, ಶ್ಯಾಮಲಾ, ಸಂಯೋಜಕಿ ದಿವ್ಯ ಸಹಕರಿಸಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಸಾದಲಿ, ಕಾರ್ಯದರ್ಶಿ ತ್ರೀವೇಣಿ, ಸದಸ್ಯ ವೇಣು ಹಾಜರಿದ್ದರು.