ಸೋಮವಾರಪೇಟೆ, ಜು. ೨೨: ತಾಲೂಕು ಕಚೇರಿಯಲ್ಲಿರುವ ಭೂ ನಕ್ಷೆ ಮತ್ತು ಆಕಾರ್ ಬಂದ್ ನೀಡುವ ಶಾಖೆಗೆ ಕನಿಷ್ಟ ಈರ್ವರು ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕು ರೈತ ಸಂಘ ಆಗ್ರಹಿಸಿದೆ.

ಸೋಮವಾರಪೇಟೆ ತಾಲೂಕು ಕಚೇರಿಯ ಭೂ ಮಾಪನ ವಿಭಾಗದಲ್ಲಿ ಈ ಹಿಂದೆ ಮೂವರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ದಾಖಲೆಗಳು ಲಭಿಸುತ್ತಿದ್ದವು. ಇದೀಗ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅನೇಕ ಬಾರಿ ಕಚೇರಿಗೆ ಅಲೆಯುವಂತಾಗಿದೆ. ಸೋಮವಾರಪೇಟೆಯು ಗ್ರಾಮೀಣ ಪ್ರದೇಶವನ್ನೇ ಒಳಗೊಂಡಿದ್ದು ಕೃಷಿಕರೆ ಹೆಚ್ಚಾಗಿದ್ದಾರೆ ಇದರೊಂದಿಗೆ ಭೂ ದಾಖಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇವುಗಳನ್ನು ಸರಿಪಡಿಸಿಕೊಳ್ಳಲು ಹಳೆಯ ದಾಖಲೆಗಳ ಅವಶ್ಯಕತೆಯಿದೆ. ಆದರೆ ಭೂ ಮಾಪನ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಸಕಾಲದಲ್ಲಿ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೈತರಿಗೆ ಅನಾನುಕೂಲವಾಗಿದ್ದು, ತಕ್ಷಣ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ತಾಲೂಕು ಸಂಚಾಲಕ ಕೆ.ಎಂ. ಲಕ್ಷö್ಮಣ ಸೇರಿದಂತೆ ಇತರರು, ಜಿಲ್ಲಾ ಭೂ ಮಾಪನ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಕಂದಾಯ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.