ಮಡಿಕೇರಿ, ಜು. ೨೨: ೨ನೇ ಮೊಣ್ಣಂಗೇರಿ ಗ್ರಾಮದ ಗುಡ್ಡ ಪ್ರದೇಶದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಮಕೊಲ್ಲಿ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಮತ್ತು ಎನ್ಡಿಆರ್ಎಫ್ ತಂಡ ತೆರಳಿ ಪರಿಶೀಲಿಸಿತು.
ಪರಿಶೀಲನೆ ನಡೆಸಲು ತೆರಳಿದ ಸಂದರ್ಭದಲ್ಲಿ ಮಳೆಯು ಹೆಚ್ಚಾದ ಕಾರಣ ಸ್ಥಳೀಯರು ಬಿರುಕು ಬಿಟ್ಟಿರುವ ಸ್ಥಳವನ್ನು ಮಳೆ ಕಡಿಮೆಯಾದ ನಂತರ ತೋರಿಸುವುದಾಗಿ ತಿಳಿಸಿದ ಮೇರೆಗೆ ೨ನೇ ಮೊಣ್ಣಂಗೇರಿ ಗುಡ್ಡ ಪ್ರದೇಶದಲ್ಲಿ ೨೦೧೮ನೇ ಸಾಲಿನಲ್ಲಿ ಬೆಟ್ಟ ಕುಸಿದಿದ್ದ ಪ್ರದೇಶ ಹಾಗೂ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ತಂಡವು ಪರಿಶೀಲಿಸಿತು. ಈ ಪ್ರದೇಶದಲ್ಲಿ ೨೦೧೮ನೇ ಸಾಲಿನಲ್ಲಿ ಗುಡ್ಡ ಕುಸಿದಿದ್ದ ಪ್ರದೇಶದ ಒಂದು ಭಾಗದಲ್ಲಿ ಅಲ್ಪ ಪ್ರಮಾಣದ ಮಣ್ಣು ಜರಿದಿದ್ದು ಹಾಗೂ ಪಕ್ಕದ ಗುಡ್ಡದಲ್ಲಿ ಸಣ್ಣ ಪ್ರಮಾಣದ ಬಿರುಕು ಬಿಟ್ಟಿರುವುದು ಕಂಡುಬAದಿದೆ.
ಗುಡ್ಡದ ಕೆಳಭಾಗದ ಪೂರ್ವ ದಿಕ್ಕಿನಲ್ಲಿ ಸುಮಾರು ೯೦೦ ಮೀಟರ್ ದೂರದಲ್ಲಿ ಅಂದಾಜು ೩೦ ಮನೆಗಳಿರುತ್ತದೆ. ಮಳೆ ಹೆಚ್ಚಾಗಿರುವ ಕಾರಣ ಹಾಗೂ ಮಂಜು ಕವಿದಿರುವುದರಿಂದ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ, ಮಳೆ ಕಡಿಮೆಯಾದ ನಂತರ ಬಿರುಕು ಬಿಟ್ಟಿರುವ ಪ್ರದೇಶಗಳನ್ನು ಅಧ್ಯಯನ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ ತಿಳಿಸಿದ್ದಾರೆ.