ಶನಿವಾರಸಂತೆ, ಜು. ೨೨: ಕೊಡ್ಲಿಪೇಟೆ-ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಪುಷ್ಯ ಮಳೆ ಆರಂಭದಲ್ಲೇ ಬಿಡುವು ಪಡೆದಿದೆ. ಕಳೆದ ೧೫ ದಿನಗಳ ಮಳೆ-ಗಾಳಿಯ ಹೊಡೆತಕ್ಕೆ ತತ್ತರಿಸಿ ಹೋಗಿರುವ ರೈತರು ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ದುAಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗದ್ದೆಗಳಲ್ಲಿ ಹಾಕಿದ್ದ ಭತ್ತದ ಅಗೆ ಜಲಾವೃತವಾಗಿದೆ. ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ನಾಟಿ ಕೆಲಸಕ್ಕೆ ಸಿದ್ಧರಾಗಬೇಕಿದ್ದ ರೈತರು ಮರು ಬೀಜ ಬಿತ್ತನೆ ಕಾಯಕದಲ್ಲಿ ಮಗ್ನರಾಗಿದ್ದಾರೆ. ಆಗಿರುವ ನಷ್ಟದ ಜೊತೆಯಲ್ಲಿ ಮತ್ತೆ ಮಳೆ ಧಾರಾಕಾರ ಸುರಿದರೇ ಎಂಬ ಆತಂಕವೂ ಮೂಡಿದೆ.
ದುಂಡಳ್ಳಿ ಗ್ರಾಮದ ರೈತ ಡಿ.ಎಸ್. ವೆಂಕಟೇಶ್ ೨ ಗದ್ದೆಗಳಲ್ಲಿ ರೂ. ೨,೫೦೦ ದರದ ಭತ್ತದ ಬೀಜದ ನೀರು ಅಗೆ ಹಾಕಿದ್ದು, ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಗುರುವಾರ ಪುನಃ ಭತ್ತದ ಬೀಜ ಖರೀದಿಸಿ ತಂದು ನೀರು ಅಗೆ ಹಾಕಿದ್ದಾರೆ.
‘ಬೇಸಾಯವೇ ನಮ್ಮ ಕಸುಬು, ವರ್ಷವಿಡಿ ಕುಟುಂಬದವರೆಲ್ಲಾ ಊಟ ಮಾಡಬೇಕಲ್ಲ. ನಷ್ಟ ಆಗಿದೆ. ಮರಳಿ ಯತ್ನವ ಮಾಡು ಅನ್ನೋ ಹಂಗೆ ಮತ್ತೆ ಬೀಜ ಬಿತ್ತನೆ ಮಾಡಿದ್ದೀನಿ. ಉತ್ತೊದು ಬಿತ್ತೊದು ನಮ್ ಕರ್ತವ್ಯ. ಬೆಳೆಯೋದು ಬಿಡೋದು ದೈವ ಸಂಕಲ್ಪ’ ಎಂದು ವೆಂಕಟೇಶ್ ಆಶಯ ವ್ಯಕ್ತಪಡಿಸಿದರು.
ಕಾಫಿ ತೋಟಗಳಲ್ಲೂ ಗೊಬ್ಬರ ಹಾಕಿಸುವ, ಚಿಗುರು ತೆಗೆಯುವ ಕೆಲಸ ನಡೆಯುತ್ತಿದೆ. ಮಳೆ-ಗಾಳಿಗೆ ಅಂಜಿ ಮನೆಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರು ತೋಟದತ್ತ ಹೆಜ್ಜೆ ಹಾಕಿದ್ದಾರೆ.